ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿ ಹಾಗೂ ಮಲೆನಾಡಿನ ಸಮಸ್ಯೆಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು. ರೈತರಿಗೆ ನೊಟೀಸ್ ನೀಡದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿದೆ ಸಿಎಂ ಭಾಷಣದ ಪ್ರಮುಖ ಪಾಯಿಂಟ್ಸ್

ಅರಣ್ಯ ಇಲಾಖೆ ಅಧಿಕಾರಿಗಳು ಬಗರ್ ಹುಕುಂ ಸಾಗುವಳಿದಾರರು ಸೇರಿ ಸಾಂಪ್ರದಾಯಿಕ ಅರಣ್ಯ ಒತ್ತುವರಿದಾರರಿಗೆ ಯಾವುದೇ ಕಾರಣಕ್ಕೂ ನೋಟಿಸ್ ನೀಡಬಾರದು. ಹೊಸದಾಗಿ ಒತ್ತುವರಿಗೆ ಅವಕಾಶ ಆಗದಂತೆ ನಿಗಾ ವಹಿಸಬೇಕು. 94ಸಿ ಹಾಗೂ ಬಗರ್ಹುಕುಂ ಭೂಮಿಯ ಹಕ್ಕುಪತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಶೀಘ್ರದಲ್ಲಿ ಪ್ರತ್ಯೇಕ ಸಂಪುಟ ಸಭೆ ಕರೆದು ಚರ್ಚೆ ನಡೆಸಲಾಗುವುದು.


ಕಸ್ತೂರಿ ರಂಗನ್ ವರದಿಗೆ ಸಂಬಂಧ ಮಲೆನಾಡಿನ ರೈತರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ನಡೆಸಲಿದೆ. ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಹೊಸದಾಗಿ ಭೌತಿಕ ಸರ್ವೇ ನಡೆಸುವುದು, ಪರಿಸರ ಸೂಕ್ಷ್ಮ ಪ್ರದೇಶದ ಕೆಲ ಗ್ರಾಮಗಳನ್ನು ಕೈ ಬಿಡುವ ಬಗ್ಗೆ ಕಾನೂನಿನ ವ್ಯಾಪ್ತಿಯಲ್ಲಿ ಪರಿಶೀಲಿಸಲಾಗುವುದು.

ಶಾಸಕರು ಬಗರ್ಹುಕುಂ, ಅಕ್ರಮ ಸಕ್ರಮ ಕುರಿತಾದ ಅರ್ಜಿಗಳ ವಿಲೇವಾರಿಗೆ ಪ್ರತೀ ತಿಂಗಳು ತಪ್ಪದೇ ಸಭೆ ನಡೆಸಿ ಬಡವರಿಗೆ ನೆರವಾಗಬೇಕು. ಭೂಮಿ ಮಂಜೂರಾತಿ ವಿಚಾರದಲ್ಲಿ ತೊಡಕುಗಳಿದ್ದರೆ ಆ ಕುರಿತು ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚಿಸಹುದು.

ಬಗರ್ ಹುಕುಂ ಸಾಗುವಳಿಗೆ ಅವಕಾಶ ನೀಡಿದ್ದು ಕಾಂಗ್ರೆಸ್. ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದ್ದು ಕೂಡಾ ಕಾಂಗ್ರೆಸ್. ಈಗ ಇದೇ ಕಾಂಗ್ರೆಸ್ ಸರ್ಕಾರ ಕಸ್ತೂರಿ ರಂಗನ್ ವರದಿ ವಿಷಯದಲ್ಲೂ ರೈತರ ಪರವಾಗಿ ನಿಲ್ಲಲಿದೆ.

ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ನೀಡಲು ಎಸ್ಸಿ, ಎಸ್ಟಿ ಸಮುದಾಯದವರು 25 ವರ್ಷ ಆ ಸ್ಥಳದಲ್ಲಿ ವಾಸವಾಗಿರಬೇಕು. ಬೇರೆ ವರ್ಗದವರು 75 ವರ್ಷ ವಾಸವಿರುವುದಕ್ಕೆ ದಾಖಲೆ ಒದಗಿಸಬೇಕೆಂಬ ನಿಯಮವಿದೆ. ಹೀಗಾಗಿ ಎಲ್ಲರಿಗೂ 25 ವರ್ಷಗಳ ದಾಖಲೆ ಸಾಕು ಎಂಬ ಕಾನೂನು ರೂಪಿಸುವಂತೆ ನಿರ್ಣಯ ಕೈಗೊಂಡು ಅದನ್ನು ಕೇಂದ್ರ ಸರ್ಕಾರಕ್ಕೆ ಕಳಿಸಲಾಗುವುದು.