ಬೆಂಗಳೂರು: ಕೊಲೆ ಯತ್ನ ಪ್ರಕರಣದ ಆರೋಪ ಎದುರಿಸುತ್ತಿದ್ದ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ. ನ್ಯಾಯಾಧೀಶ ಕೆ.ಬಿ. ಶಿವಪ್ರಸಾದ್ ಅವರು ಮಂಗಳವಾರ ತೀರ್ಪು ನೀಡಿದ್ದಾರೆ.
ಏನಿದು ಪ್ರಕರಣ?
ಭದ್ರಾವತಿಯ ಹಳದಮ್ಮ ದೇವಿಯ ಜಾತ್ರೆ ಪ್ರಯುಕ್ತ 2010ರ ಮೇ 21ರಂದು ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆ ನಂತರ ಶಾಸಕ ಬಿ.ಕೆ.ಸಂಗಮೇಶ್ವರ ಹಾಗೂ ಅವರ ಬೆಂಬಲಿಗರು ಕಾರುಗಳಲ್ಲಿ ಬಂದು ನಮ್ಮ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂದು ಸಿ.ಮಹೇಶ್ ಕುಮಾರ್ ದೂರು ನೀಡಿದ್ದರು. ಈ ಸಂದರ್ಭ ತನ್ನ ಸಹೋದರಿ ಜಯಮ್ಮ ಅವರ ಮೇಲೂ ಹಲ್ಲೆಯಾಗಿದೆ ಎಂದು ಆರೋಪಿಸಿದ್ದರು.

ನ್ಯಾಯಾಲಯದ ಆದೇಶವೇನು?
ಆರೋಪಿಗಳಾದ ಬಿ.ಕೆ.ಸಂಗಮೇಶ್ವರ ಮತ್ತು ಅವರ ಅಣ್ಣ ಬಿ.ಕೆ.ಮೋಹನ್, ತಮ್ಮ ಬಿ.ಕೆ.ಜಗದೀಶ್ ಹಾಗೂ ಸಂಗಮೇಶ್ವರ ಅವರ ಪುತ್ರರಾದ ಗಣೇಶ ಮತ್ತು ಬಸವರಾಜ ಪರ ಹಿರಿಯ ವಕೀಲ ಸಿ.ಹೆಚ್.ಹನುಮಂತರಾಯ ಅವರು ಮಂಡಿಸಿದ್ದರು. ಸಿ.ಮಹೇಶ್ ಕುಮಾರ್ ಉದ್ದೇಶಪೂರ್ವಕವಾಗಿ ಸುಳ್ಳು ದೂರು ನೀಡಿದ್ದರು. ವಿಚಾರಣೆ ವೇಳೆ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಲಾಗಿದೆ ಎಂದು ವಕೀಲ ಸಿ.ಹೆಚ್. ಹನುಮಂತರಾಯ ವಾದಿಸಿದ್ದರು. ಇದನ್ನು ನ್ಯಾಯಾಲಯ ಮಾನ್ಯ ಮಾಡಿದೆ.
ಇನ್ನು, ಮಹೇಶ್ ಕುಮಾರ್ ಅವರ ಸಹೋದರಿ ಜಯಮ್ಮ ನಂಬಲರ್ಹ ಸಾಕ್ಷ್ಯ ನುಡಿಯಲು ವಿಫಲರಾಗಿದ್ದಾರೆ. ಹೀಗಾಗಿ ಅವರು ಯಾವುದೇ ಪರಿಹಾರಕ್ಕೆ ಅನರ್ಹರು ಎಂದು ಪೀಠ ತಿಳಿಸಿದೆ. ತನಿಖೆಯಲ್ಲಿ ಲೋಪಗಳಿವೆಯೇ ಎಂದು ಪರಿಶೀಲಿಸುವಂತೆ ಅಕ್ವಿಟಲ್ ರಿವ್ಯೂ ಕಮಿಟಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ. ಅಲ್ಲದೆ ಶಾಸಕ ಸಂಗಮೇಶ್ವರ ಸೇರಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.