ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಹೇಗಿತ್ತು ಸಂಭ್ರಮ? ಇಲ್ಲಿದೆ ಡಿಟೇಲ್ಸ್‌

ಭದ್ರಾವತಿ: ನಗರದ ಹೊಸಮನೆ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಹಾಗೂ ಹಿಂದೂ ರಾಷ್ಟ್ರಸೇನಾ ಸಮಿತಿಯ ಗಣಪತಿ ಮೂರ್ತಿಯ ರಾಜಬೀದಿ ಉತ್ಸವ ಅದ್ಧೂರಿಯಾಗಿ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರ ಸಮ್ಮುಖದಲ್ಲಿ ಭದ್ರಾ ನದಿಯಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಯಿತು.

ಇಡೀ ದಿನ ನಡೆಯಿತು ಮೆರವಣಿಗೆ

ಬೆಳಿಗ್ಗೆ 11.30ಕ್ಕೆ ಮಹಾಮಂಗಳಾರತಿ ಬಳಿಕ ಮೆರವಣಿಗೆ ಆರಂಭವಾಯಿತು. ಹೊಸಮನೆ ಮಂಟಪದಿಂದ ಹೊರಟು ಶಿವಾಜಿ ವೃತ್ತ, ರಂಗಪ್ಪ ವೃತ್ತ, ಚನ್ನಗಿರಿ ರಸ್ತೆ, ಮಾಧವಾಚಾರ್ ವೃತ್ತ, ಹಾಲಪ್ಪ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ತರೀಕೆರೆ ರಸ್ತೆ ಮೂಲಕ ನಗರಸಭೆ ಕಚೇರಿ ಎದುರಿನ ಭದ್ರಾ ನದಿಯವರೆಗೆ ಮೆರವಣಿಗೆ ನಡೆಯಿತು.

Hindu-Mahasabha-Ganesha-Procession-at-Bhadaravathi

ಕಲಾ ತಂಡಗಳು, ಭರ್ಜರಿ ಡಾನ್ಸ್‌

ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಕೇಸರಿ ಧ್ವಜಗಳು, ಬಂಟಿಂಗ್ಸ್, ಬೃಹತ್ ರಂಗೋಲಿಗಳು ಹಾಗೂ ಫ್ಲೆಕ್ಸ್‌ಗಳು ರಾರಾಜಿಸಿದವು. ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳುಕುಣಿತ, ಗೊಂಬೆಕುಣಿತ ಹಾಗೂ ನಾದಸ್ವರ ಕಲಾ ತಂಡಗಳು ಮೆರುಗು ನೀಡಿದವು. ಉರಿಯುವ ಬಿಸಿಲನ್ನೂ ಲೆಕ್ಕಿಸದೆ ಯುವಕ – ಯುವತಿಯರು ಡಿಜೆ ಸಂಗೀತಕ್ಕೆ ಭರ್ಜರಿಯಾಗಿ ಕುಣಿದು ಸಂಭ್ರಮಿಸಿದರು.

ಜೆಡಿಎಸ್‌ ಪಕ್ಷದಿಂದ ಗಂಗಾರತಿ

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಜೆಡಿಎಸ್ ಪಕ್ಷದ ವತಿಯಿಂದ ಕಾಶಿ ಮಾದರಿಯ ಗಂಗಾರತಿ ನೆರವೇರಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳು ಭಕ್ತರಿಗೆ ಅನ್ನಸಂತರ್ಪಣೆ, ಮಜ್ಜಿಗೆ ಹಾಗೂ ಪ್ರಸಾದ ವಿತರಿಸಿದವು. ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ವಿಶೇಷ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದ ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಸಹಕಾರ ಮಹಾಮಂಡಲದ ಉಪಾಧ್ಯಕ್ಷ ಬಿ.ಕೆ.ಶಿವಕುಮಾರ್, ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಹಿಂದೂ ಮಹಾಸಭಾ ಅಧ್ಯಕ್ಷ ವಿ.ಕದಿರೇಶ್, ನಗರಸಭೆ ಸದಸ್ಯರಾದ ಸುದೀಪ್, ಚನ್ನಪ್ಪ, ಮಣಿ, ಬಿಜೆಪಿ ಅಧ್ಯಕ್ಷ ಜಿ.ಧರ್ಮಪ್ರಸಾದ್ ಹಾಗೂ ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿ ಸೇರಿ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.