ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಬೆನ್ನಲ್ಲೇ ಭಿನ್ನಮತ ಸ್ಫೋಟಗೊಂಡಿದೆ. ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅವರು ಸ್ವಪಕ್ಷದ ಮುಖಂಡರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಜಿಲ್ಲಾ ನಾಯಕರ ವಿರುದ್ಧ ನೇರಾನೇರ ಆರೋಪ ಮಾಡಿದ್ದಾರೆ.
ಹರ್ಷ ಫರ್ನ್ ಹೊಟೇಲ್‌ನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಎಸ್.ಸುಂದರೇಶ್, ಸಚಿವರೊಬ್ಬರ ಆಪ್ತರೊಬ್ಬರು ಸಚಿವರ ಹೆಸರಿನಲ್ಲಿ ವಿವಿಧ ಕಚೇರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇಲ್ಲಿದೆ ಸುಂದರೇಶ್ ಹೇಳಿಕೆಯ ಪಾಯಿಂಟ್ಸ್

‘40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರನ್ನು ನಿರ್ಲಕ್ಷಿಸಿ, ಇತ್ತೀಚೆಗೆ ಬಂದ ಹೊಸಬರಿಗೆ ಹುದ್ದೆ ಮತ್ತು ಸ್ಥಾನಮಾನಗಳನ್ನು ನೀಡಲಾಗುತ್ತಿದೆ. ಪಕ್ಷದ ನಾಯಕರ ನಡವಳಿಕೆ ಹೀಗೆಯೇ ಮುಂದುವರಿದಲ್ಲಿ ತಾವು ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ತೊರೆಯಲಿದ್ದೇವೆ.’

‘ಶಾಸಕರಾದ ಬೇಳೂರು ಗೋಪಾಲಕೃಷ್ಣ ಹಾಗೂ ಬಿ.ಕೆ. ಸಂಗಮೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಿದರೆ ಶಿವಮೊಗ್ಗ ಹಾಗೂ ಕಾರವಾರದಲ್ಲಿ ಮತ್ತು ಸಂಗಮೇಶ್ ಅವರಿಗೆ ಸಚಿವ ಸ್ಥಾನ ನೀಡಿದರೆ ಹೊಳೆಹೊನ್ನೂರು ಹಾಗೂ ಶಿಕಾರಿಪುರ ಭಾಗಗಳಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ.’

‘ಬಿ.ವಿ.ಶ್ರೀನಿವಾಸ್ ಅವರು ಸುರ್ಜೇವಾಲ ಅವರಿಗೆ ಶಿವಮೊಗ್ಗ ನನ್ನ ಜಿಲ್ಲೆ. ನಾನು ಹೇಳಿದವರಿಗೆ ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ. ಆದ್ದರಿಂದ ಬಿ.ವಿ.ಶ್ರೀನಿವಾಸ್ ಅವರನ್ನು ಜಿಲ್ಲೆಯಿಂದ ಹೊರೆಗೆ ಕಳುಹಿಸಬೇಕು.ʼ

‘ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಈ ಹಿಂದೆ ಹೇಳಿದ್ದರು. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಎದುರಲ್ಲೇ ಇದನ್ನು ಪ್ರಸ್ತಾಪಿಸಿದ್ದರು. ಆಗ ನಾನು ಪಕ್ಷದ ಜಿಲ್ಲಾ ಅಧ್ಯಕ್ಷನಾಗಿದ್ದೆ.ʼ

‘ಮುಂದಿನ ವಿಧಾನಸಭೆ ಚುನಾವಣೆಗೆ ತೀರ್ಥಹಳ್ಳಿಗೆ ಆರ್.ಎಂ.ಮಂಜುನಾಥ ಗೌಡ, ಶಿವಮೊಗ್ಗದಲ್ಲಿ ತಮಗೆ, ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಬೇಕು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಿಲ್ಲೆಯ 7 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆʼ

‘ಬೇರೆ ಪಕ್ಷದಿಂದ ಬಂದವರು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಬೈದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಏಳೆಂಟು ಸಚಿವರನ್ನು ಕೈಬಿಟ್ಟು ದಿನೇಶ್ ಗುಂಡೂರಾವ್, ಶರತ್ ಬಚ್ಚೇಗೌಡ, ಕೃಷ್ಣಪ್ಪ ಸೇರಿದಂತೆ ಹಲವರಿಗೆ ಸಚಿವ ಸ್ಥಾನ ನೀಡಬೇಕು.

‘ಇನ್ನೊಂದು ತಿಂಗಳು ಕಾದು ನೋಡಿ. ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷನಾಗಿ ನಾನೇ ಅಧಿಕಾರ ವಹಿಸಿಕೊಳ್ಳುತ್ತೇನೆ. ಬೇಕಿದ್ದರೆ ಕಾದು ನೋಡಿ.ʼ