ಜೈಲು ಕಾಂಪೌಂಡ್‌ ಬಳಿ ಓಡಾಡುತ್ತಿದ್ದ ಇಬ್ಬರು ಯುವಕರು ವಶಕ್ಕೆ, ಆಮೇಲೆ ದಾಖಲಾಯ್ತ ಕೇಸ್‌, ಆಗಿದ್ದೇನು?

ಶಿವಮೊಗ್ಗ: ಸೋಗಾನೆ ಕೇಂದ್ರ ಕಾರಾಗೃಹದ ಕಾಂಪೌಂಡ್ ಹೊರಭಾಗದಿಂದ ಒಳಗೆ ಮೊಬೈಲ್ ಫೋನ್‌ಗಳನ್ನು ಎಸೆಯಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಜೈಲು ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಮಹಮ್ಮದ್ ಸಮೀವುಲ್ಲಾ ಹಾಗೂ ಇರ್ಫಾನ್ ಎಂದು ಗುರುತಿಸಲಾಗಿದೆ. ಇಬ್ಬರೂ ಸೋಗಾನೆ ಜೈಲಿನ ಪಶ್ಚಿಮ ಭಾಗದ ಕಾಂಪೌಂಡ್ ಗೋಡೆಯ ಬಳಿ ಮೊಬೈಲ್ ಫೋನ್‌ಗಳನ್ನು ಎಸೆಯಲು ಹೊಂಚು ಹಾಕುತ್ತಿದ್ದರು ಎಂದು ಆರೋಪಿಸಲಾಗಿದೆ.

Shimoga-Central-Jail-Building

ಸೆಪ್ಟೆಂಬರ್ 20 ರಂದು ಮಧ್ಯಾಹ್ನ ಜೈಲು ಕಾಂಪೌಂಡ್‌ ಬಳಿ ಇಬ್ಬರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದರು. ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಲು ಮುಂದಾದಾಗ ಆರೋಪಿಗಳು ಹತ್ತಿರದ ನೀಲಗಿರಿ ತೋಪಿನಲ್ಲಿ ಅಡಗಿ ಪರಾರಿಯಾಗಿದ್ದರು. ಬಳಿಕ ಸಂಜೆ ಕಾರಾಗೃಹದ ಮುಖ್ಯ ದ್ವಾರದ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಬ್ಬಂದಿ ಇಬ್ಬರನ್ನೂ ಸುತ್ತುವರಿದು ವಶಕ್ಕೆ ಪಡೆದಿದ್ದಾರೆ.

ಯುವಕರ ಬಳಿ ಇದ್ದ ವಾಹನದ ತಪಾಸಣೆ ನಡೆಸಿದಾಗ ಕಪ್ಪು ಟೇಪ್‌ನಿಂದ ಸುತ್ತಿಡಲಾಗಿದ್ದ 2 ನೋಕಿಯಾ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ ಎಂದು ಆರೋಪಿಸಲಾಗಿದೆ. ಜೈಲು ಸಿಬ್ಬಂದಿ ಇಬ್ಬರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.