ಶಿವಮೊಗ್ಗ: ಯೂಟ್ಯೂಬ್ನಲ್ಲಿ ಪ್ರಕಟವಾದ ಲಾಟರಿ ಜಾಹೀರಾತು ನಂಬಿ, ₹12 ಲಕ್ಷ ರೂಪಾಯಿ ಬಹುಮಾನದ ಆಸೆಗೆ ಮಹಿಳೆಯೊಬ್ಬರು ₹8.93 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ.
ಶಿವಮೊಗ್ಗದ ಮಹಿಳೆಯೊಬ್ಬರು ಮಾರ್ಚ್ 25 ರಂದು ಮನೆಯಲ್ಲಿ ಯೂಟ್ಯೂಬ್ ವೀಕ್ಷಿಸುತ್ತಿದ್ದಾಗ ಕೇರಳ ಲಾಟರಿ ಎಂಬ ಜಾಹೀರಾತು ಬಂದಿತ್ತು. ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿ ತಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿದ್ದ ಮಹಿಳೆಗೆ, ₹12 ಲಕ್ಷದ ಲಾಟರಿ ಬಹುಮಾನ ಬಂದಿದೆ ಎಂದು ವಾಟ್ಸಾಪ್ ಮೆಸೇಜ್ ಬಂದಿತ್ತು. ನಂಬಿದ ಮಹಿಳೆ ವಂಚಕರು ನೀಡಿದ್ದ ಹೆಲ್ಪ್ಲೈನ್ ಸಂಖ್ಯೆಗೆ ಕರೆ ಮಾಡಿದ್ದಾರೆ.

ಬಹುಮಾನದ ಹಣ ಬಿಡುಗಡೆ ಮಾಡಲು ಪ್ರೊಸೆಸಿಂಗ್ ಶುಲ್ಕ, ಜಿಎಸ್ಟಿ, ತೆರಿಗೆ ಹಾಗೂ ವಿವಿಧ ಸೇವಾ ಶುಲ್ಕಗಳನ್ನು ಪಾವತಿಸಬೇಕು ಎಂದು ಹಂತ ಹಂತವಾಗಿ ವಂಚಕರು ಮಹಿಳೆಗೆ ತಿಳಿಸಿದ್ದರು. ವಂಚಕರ ಮಾತು ನಂಬಿದ ಮಹಿಳೆ ಮಾರ್ಚ್ 31 ರಿಂದ ಆಗಸ್ಟ್ 27 ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆ ಹಾಗೂ ಯುಪಿಐ ಐಡಿಗಳಿಗೆ ಒಟ್ಟು ₹8,93,297 ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಹುಮಾನದ ಮೊತ್ತ ಕೈಸೇರದೆ ಇದ್ದಾಗ ತಾನು ಮೋಸ ಹೋಗಿರುವುದು ಮಹಿಳೆಗೆ ಅರಿವಾಗಿದೆ. ಈ ಸಂಬಂಧ ರಾಷ್ಟ್ರೀಯ ಸೈಬರ್ ಹೆಲ್ಪ್ಲೈನ್ 1930 ರಲ್ಲಿ ದೂರು ನೀಡಿದ ಬಳಿಕ, ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.