ಶಿವಮೊಗ್ಗ: ಬ್ಯಾಂಕ್ ಸಂಘಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆ ಗ್ರಾಹಕರ ಅನುಕೂಲಕ್ಕಾಗಿ ಸೆಪ್ಟೆಂಬರ್ 27ರ ಭಾನುವಾರದಂದು ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ.ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 28 ರಿಂದ ಸೆಪ್ಟೆಂಬರ್ 30ರ ವರೆಗೆ ಒಟ್ಟು ಮೂರು ದಿನ ದೇಶದಾದ್ಯಂತ ಬ್ಯಾಂಕ್ ಮುಷ್ಕರ ನಡೆಯಲಿದೆ. ಇದರ ಜೊತೆಗೆ ಸೆಪ್ಟೆಂಬರ್ 26 ಮತ್ತು ಸೆಪ್ಟೆಂಬರ್ 27ರಂದು ವಾರದ ರಜೆ ಇರುವುದರಿಂದ ಸಾರ್ವಜನಿಕರ ಬ್ಯಾಂಕಿಂಗ್ ಸೇವೆಗೆ ಅಡಚಣೆಯಾಗುವ ಸಾಧ್ಯತೆಯಿದೆ. ಹೀಗಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ವಿಶೇಷ ಅನುಮೋದನೆ ನೀಡಿದೆ.

ಆರ್‌ಬಿಐ ಸೂಚನೆಯಂತೆ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಗ್ರಾಮೀಣ ಬ್ಯಾಂಕ್‌ಗಳ ಶಾಖೆಗಳು ಸೆಪ್ಟೆಂಬರ್ 27ರ ಭಾನುವಾರದಂದು ಪೂರ್ಣ ಪ್ರಮಾಣದಲ್ಲಿ ಬಾಗಿಲು ತೆರೆಯಲಿದ್ದು, ಎಂದಿನಂತೆ ಸೇವೆಗಳನ್ನು ಒದಗಿಸಲಿವೆ ಎಂದು ಹನುಮಂತಪ್ಪ ಮಾಹಿತಿ ನೀಡಿದ್ದಾರೆ.