ಶಿವಮೊಗ್ಗ: ಶಿಕಾರಿಪುರದ ಪ್ರೀ-ಸ್ಕೂಲ್ ಒಂದಕ್ಕೆ ಅಗ್ನಿ ಸುರಕ್ಷಾ ಸಲಹಾ ಪತ್ರ (ಸಿ.ಸಿ) ನೀಡಲು ₹1 ಲಕ್ಷ ಲಂಚ ಪಡೆಯುತ್ತಿದ್ದ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕಚೇರಿಯ ಡಿ.ಎಫ್.ಒ ಅಶೋಕ ಕುಮಾರ್ ಬಿ.ಆರ್. ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಿಕಾರಿಪುರ ಟೌನ್‌ನ ಚನ್ನಕೇಶವ ನಗರದಲ್ಲಿರುವ ನಂದಗೋಕುಲ ಪ್ರೀ-ಸ್ಕೂಲ್‌ಗೆ ಅಗ್ನಿ ಸುರಕ್ಷಾ ಪ್ರಮಾಣಪತ್ರ ನೀಡಲು ಅಶೋಕ ಕುಮಾರ್ ₹1 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಶಿವಮೊಗ್ಗ ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ರೂಪಿಸಿ, ಸೆಪ್ಟೆಂಬರ್ 24 ರಂದು ಸಂಜೆ ನಗರದ ಸಾಗರ ರಸ್ತೆಯಲ್ಲಿರುವ ಜಿಲ್ಲಾ ಅಗ್ನಿಶಾಮಕ ಕಚೇರಿಯಲ್ಲಿ ಅಧಿಕಾರಿಯ ಕೊಠಡಿಯಲ್ಲೇ ದಾಳಿ ನಡೆಸಿದ್ದಾರೆ. ₹1 ಲಕ್ಷ ಲಂಚದ ಹಣ ಪಡೆದುಕೊಳ್ಳುತ್ತಿದ್ದ ವೇಳೆ ಅಧಿಕಾರಿಯನ್ನು ಟ್ರ್ಯಾಪ್ ಮಾಡಲಾಗಿದೆ. ಲೋಕಾಯುಕ್ತ ಸಿಬ್ಬಂದಿ ಲಂಚದ ಹಣವನ್ನು ಜಪ್ತಿ ಮಾಡಿದ್ದು, ಆರೋಪಿ ಅಧಿಕಾರಿ ಅಶೋಕ ಕುಮಾರ್ ಬಿ.ಆರ್. ಅವರನ್ನು ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ದಾಳಿಯ ವಿಡಿಯೋ ವರದಿ ಇಲ್ಲಿದೆ.