ಗೋಪಿ ಸರ್ಕಲ್‌ನಲ್ಲಿ ಖಾಲಿ ಚೊಂಬು ಪ್ರದರ್ಶಿಸಿ ಬಿಜೆಪಿ ಆಕ್ರೋಶ, ಕಾರಣವೇನು?

ಶಿವಮೊಗ್ಗ: ರಾಜ್ಯ ಸರ್ಕಾರ ದಿವಾಳಿಯಾಗಿದೆ. ಯಾವುದೇ ಯೋಜನೆಗಳಿಗೆ ಹಣವಿಲ್ಲ. ಈ ಸರ್ಕಾರ ಘೋಷಣೆಗಳಿಗೆ ಸೀಮಿತವಾಗಿದೆ ಎಂದು ಜಿಲ್ಲಾ ಬಿಜೆಪಿ ಅಕ್ರೋಶ ವ್ಯಕ್ತಪಡಿಸಿದೆ. ನಗರದ ಗೋಪಿ ವೃತ್ತದಲ್ಲಿ ಖಾಲಿ ಚೊಂಬು ಪ್ರದರ್ಶಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ರಾಜ್ಯದಲ್ಲಿರುವುದು ಜನವಿರೋಧಿ ಸರ್ಕಾರ. ಗ್ಯಾರಂಟಿ ಯೋಜನೆಗಳನ್ನು ನೀಡಲು ಸಿಎಂ ಹರಸಾಸಹ ಪಡುತ್ತಿದ್ದಾರೆ. ಇದೀಗ ಆರ್ಥಿಕ ಇಲಾಖೆಯಿಂದ ಸರ್ಕಾರಕ್ಕೆ ಬರೆದಿರುವ ಪತ್ರ ಬಹಿರಂಗವಾಗಿದ್ದು, ಇದರಲ್ಲಿ ಸರ್ಕಾರದ ನಿಜ ಬಣ್ಣ ಬಯಲಾಗಿದೆ. ಸರ್ಕಾರ ಆರ್ಥಿಕ ಶಿಸ್ತು ಮೀರುತ್ತಿರುವುದು ಈ ಪತ್ರದಿಂದ ದೃಢವಾಗಿದೆ ಎಂದು ಬಿಜೆಪಿ ಮುಖಂಡರು ವಾಗ್ದಾಳಿ ನಡೆಸಿದರು.

Shivamogga-BJP-protests-against-State-Government

ಸಾಲದ ಮೊತ್ತ 8 ಲಕ್ಷ ಕೋಟಿ ರೂ.ಗೆ ತಲುಪಿದೆ. ಖಜಾನೆಯಲ್ಲಿ ಹಣ ಇಲ್ಲ ಎಂದು ಸಿಎಂಗೆ ಪತ್ರ ಬರೆದಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರ್ಥಿಕ ಇಲಾಖೆ ಸರ್ಕಾರಕ್ಕೆ ಚಾಟಿ ಬೀಸಿದೆ.

– ಎನ್‌.ಕೆ.ಜಗದೀಶ್, ಬಿಜೆಪಿ ಜಿಲ್ಲಾ ಅಧ್ಯಕ್ಷ

ರಾಜ್ಯದ ಹಣಕಾಸಿನ ಸ್ಥಿತಿ ಬಗ್ಗೆ ಸಿಎಂ ಶ್ವೇತಪತ್ರ ಬಿಡುಗಡೆ ಮಾಡಲಿ. ಖಜಾನೆಯಲ್ಲಿ ಹಣವಿಲ್ಲದ ಕಾರಣ ಮಂತ್ರಿಗಳು ನಗರ ಪಾಲಿಕೆ, ಸೂಡಾ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಿಯಲ್ ಎಸ್ಟೆಟ್ ದಂಧೆ ಬಿಟ್ಟು ಬಿಡದಿಯ ಕಡೆ ಮುಖಮಾಡಿ ರೈತರ ನೈಜ ಸಮಸ್ಯೆಗಳತ್ತ ಗಮನಹರಿಸಲಿ.

– ಎಂ.ಬಿ.ಹರಿಕೃಷ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಎಸ್.ಜ್ಞಾನೇಶ್ವರ್, ಎನ್.ಜಿ.ನಾಗರಾಜ್‌, ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಎಸ್.ದತ್ತಾತ್ರಿ, ಸುರೇಖಾ ಮುರಳೀಧ‌ರ್, ಅನಿತಾ ರವಿಶಂಕರ್, ಧರ್ಮಪ್ರಸಾದ್‌ ಇತರರಿದ್ದರು.