ಶಿವಮೊಗ್ಗ: ವೃದ್ಧೆಯೊಬ್ಬರು ಸ್ನಾನಕ್ಕೆ ತೆರಳಿದ್ದ ವೇಳೆ ಮನೆ ಒಳಗೆ ನುಗ್ಗಿದ ಕಳ್ಳನೊಬ್ಬ, ಟೇಬಲ್ ಮೇಲಿಟ್ಟಿದ್ದ ₹3.6 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಗಾಂಧಿನಗರ ಬಿ ಬ್ಲಾಕ್‌ನ 5ನೇ ತಿರುವಿನ ರಾಘವೇಂದ್ರ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ.
ರಾಘವೇಂದ್ರ ಅವರು ತಾಯಿಗೆ ತಿಂಡಿ ನೀಡಿ ಕೆಲಸಕ್ಕೆ ತೆರಳಿದ್ದರು. ಬೆಳಿಗ್ಗೆ 11 ಗಂಟೆಗೆ ಮೀನಾಕ್ಷಮ್ಮ ಅವರು ತಮ್ಮ ಕೈಯಲ್ಲಿದ್ದ 18 ಗ್ರಾಂ ತೂಕದ ಚಿನ್ನದ ಬಳೆ ಹಾಗೂ ಕೊರಳಲ್ಲಿದ್ದ 15 ಗ್ರಾಂ ಬೆಳ್ಳಿ ಸರ ಮತ್ತು 4 ಗ್ರಾಂ ಚಿನ್ನದ ತಾಳಿಯನ್ನು ಬಿಚ್ಚಿ ಟೇಬಲ್ ಮೇಲೆ ಇಟ್ಟು ಸ್ನಾನಕ್ಕೆ ತೆರಳಿದ್ದರು ಎಂದು ದೂರಿನಲ್ಲಿ ಉಲ್ಲೇಖಸಲಾಗಿದೆ.

ಮಧ್ಯಾಹ್ನ ಮನೆಯವರು ಪರಿಶೀಲಿಸಿದಾಗ ಆಭರಣ ನಾಪತ್ತೆ ಆಗಿರುವುದು ಬೆಳಕಿಗೆ ಬಂದಿದೆ. ಅಕ್ಕಪಕ್ಕದ ಕಟ್ಟಡದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮನೆ ಒಳಗೆ ನುಗ್ಗಿ ಕೆಲವೆ ನಿಮಿಷದಲ್ಲಿ ಅಲ್ಲಿಂದ ಪರಾರಿಯಾಗಿರುವುದು ದೃಶ್ಯದಲ್ಲಿ ಸೆರೆಯಾಗಿತ್ತು. ಆ ವ್ಯಕ್ತಿ ಟೇಬಲ್ ಮೇಲಿಟ್ಟಿದ್ದ ₹2.70 ಲಕ್ಷ ಮೌಲ್ಯದ ಬಂಗಾರದ ಬಳೆ, ₹90,000 ಮೌಲ್ಯದ ಬೆಳ್ಳಿ ಸರ ಮತ್ತು ಬಂಗಾರದ ತಾಳಿಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.