ಶಿಕಾರಿಪುರದಲ್ಲಿ ಗಾರ್ಮೆಂಟ್ಸ್‌ ಕಾರ್ಮಿಕರ ಬೃಹತ್‌ ಪ್ರತಿಭಟನೆ, ಕಾರಣವೇನು?

ಶಿಕಾರಿಪುರ: ಇಪಿಎಫ್ ಮತ್ತು ಇಎಸ್‌ಐ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಆರೋಪಿಸಿ ಶಾಹಿ ಗಾರ್ಮೆಂಟ್ಸ್‌ ಕಾರ್ಮಿಕರು ಸೋಮವಾರ ಸಂಸ್ಥೆಯ ಎದುರು ಪ್ರತಿಭಟನೆ ನಡೆಸಿದರು. (ಶಿವಮೊಗ್ಗ ಲೈವ್‌.ಕಾಂ | ಮುಂದಿನ 8 ಪ್ಯಾರಾಗಳು ಕೆಳಗಿವೆ)

ಶಾಹಿ ಗಾರ್ಮೆಂಟ್ಸ್‌ನಲ್ಲಿ ತಾಲೂಕು ಹಾಗೂ ಹೊರ ಜಿಲ್ಲೆಗಳ ಸುಮಾರು 3 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಅಲ್ಪ ವೇತನಕ್ಕೆ ದುಡಿಯುತ್ತಿದ್ದಾರೆ. ಕಾರ್ಮಿಕರ ವೇತನದಿಂದ ಪ್ರತಿ ತಿಂಗಳು ಇಪಿಎಫ್ ಹಣ ಕಡಿತ ಮಾಡಲಾಗುತ್ತಿದ್ದರೂ, ಸಕಾಲಕ್ಕೆ ಹಣ ಮರುಪಾವತಿಯಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Shikaripura-Garments-workers-protest-in-shikaripura-shimoga-road

ಈ ಹಿಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಇಪಿಎಫ್ ಹಣ ನೀಡಲಾಗುತ್ತಿತ್ತು. ಇದೀಗ ಮೂರು ವರ್ಷಗಳಿಗೊಮ್ಮೆ ಹಣ ನೀಡಲಾಗುವುದು ಎಂದು ತಿಳಿಸಲಾಗಿದ್ದು, ಆದರಲ್ಲೂ ಶೇ.75ರಷ್ಟು ಹಣ ಮಾತ್ರ ವಾಪಸ್ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಅಷ್ಟು ದೀರ್ಘಾವಧಿಯವರೆಗೆ ಕಾಯುವುದು ಹೇಗೆ, ಕುಟುಂಬದ ಶಿಕ್ಷಣ, ಆರೋಗ್ಯ ಸೇರಿದಂತೆ ತುರ್ತು ಅಗತ್ಯಗಳಿಗೆ ಇಪಿಎಫ್ ಹಣ ದೊರೆಯದಿದ್ದರೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಪ ಪ್ರಮಾಣದ ವೇತನದಲ್ಲಿ ದುಡಿಯುತ್ತಿರುವ ಇಎಸ್‌ಐ ಸೇರಿ ಸಮರ್ಪಕವಾಗಿ ಒದಗಿಸಬೇಕು. ಕುಟುಂಬದ ಸದಸ್ಯರಿಗೆ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಇಎಸ್‌ಐ ದಾಖಲೆಯನ್ನು ಆಸ್ಪತ್ರೆಯಲ್ಲಿ ನೀಡಿದರೆ ಅದು ಚಾಲ್ತಿಯಲ್ಲಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.

ಪ್ರತಿಭಟನೆ ಸ್ಥಳಕ್ಕೆ ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಈ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೂ ಕಾರ್ಮಿಕರು ಪ್ರತಿಭಟನೆ ಮುಂದುವರೆಸಿದರು.

ಈ ಕುರಿತು ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾರ್ಮಿಕರನ್ನು ನೇಮಿಸಿಕೊಳ್ಳುವ ಪ್ರತಿಯೊಂದು ಸಂಸ್ಥೆಯೂ ನಿಗದಿತ ಮಾನದಂಡದಂತೆ ಕಾರ್ಮಿಕರಿಗೆ ನ್ಯಾಯಯುತ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸಲಾಗುವುದು.

– ಸುರೇಶ್, ಜನಜಾಗೃತಿ ವೇದಿಕೆ ಅಧ್ಯಕ್ಷ

ನಂತರ ಕಾರ್ಮಿಕರು ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.