ಶಿವಮೊಗ್ಗ: ನಗರದ ಹೊಟೇಲ್, ತಿನಿಸು ಮಳಿಗೆಗಳ ಮೇಲಿನ ದಿಢೀರ್ ದಾಳಿ ಮುಂದುವರೆದಿದೆ. ಉಪ ವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದಲ್ಲಿ ಇಂದು ಸಂಜೆ ನಗರದ ನಾಲ್ಕು ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಮಾರ್ಗಸೂಚಿ ಉಲ್ಲಂಘನೆ ಹಿನ್ನೆಲೆ ಲೈಸೆನ್ಸ್ ರದ್ದುಗೊಳಿಸುವ ಎಚ್ಚರಿಕೆ ನೀಡಲಾಯಿತು.
ಎಲ್ಲೆಲ್ಲಿ ನಡೆಯಿತು ದಾಳಿ?
ಸ್ಥಳ 1: ಹೊಟೇಲ್ ತಾಜ್
ಬಿ.ಹೆಚ್.ರಸ್ತೆಯ ಹೊಟೇಲ್ ತಾಜ್ ಮೇಲೆ ದಿಢೀರ್ ದಾಳಿ ನಡೆಸಲಾಯಿತು. ಕಿಚನ್ನಲ್ಲಿ ಸ್ವಚ್ಛತೆ, ಆಹಾರದ ಗುಣಮಟ್ಟವನ್ನು ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಪರಿಶೀಲಿಸಲಾಯಿತು. ಈ ಸಂದರ್ಭ ಪಾತ್ರೆ ತೊಳೆಯುವ ಜಾಗದಲ್ಲಿ ಸ್ವಚ್ಛತೆ ಇಲ್ಲದಿರುವುದು, ಕಬಾಬ್ಗೆ ಬಣ್ಣ ಬಳಕೆ ಆರೋಪ, ಅವಧಿ ಮುಗಿದ ಹಾಲು, ಪಾಮ್ ಆಯಿಲ್ ಬಳಕೆ ಸೇರಿದಂತೆ ವಿವಿಧ ನ್ಯೂನತೆ ಕಂಡು ಬಂದಿದೆ. ಹಾಗಾಗಿ ಪರೀಕ್ಷೆಗೆ ಎಂದು ಅಧಿಕಾರಿಗಳು ಆಹಾರ ಪದಾರ್ಥಗಳ ಸ್ಯಾಂಪಲ್ ಪಡೆದರು. ಒಂದು ವೇಳೆ ಕೃತಕ ಬಣ್ಣ ಬಳಕೆ ಮಾಡಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳುವುದಾಗಿ ಡಾ. ಮೈತ್ರಿ ಎಚ್ಚರಿಸಿದರು.

ಸ್ಥಳ 2: ಹೊಟೇಲ್ ಬ್ರೈಟ್
ಹೊಟೇಲ್ ಬ್ರೈಟ್ಗೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಡಾ. ಮೈತ್ರಿ, ನೇರವಾಗಿ ಕಿಚನ್ ಏರಿಯಾಗೆ ಪ್ರವೇಶಿಸಿದರು. ಜ್ಯೂಸ್ ಮಾಡಲು ಇಟ್ಟಿದ್ದ ಹಣ್ಣಿನ ಗುಣಮಟ್ಟ ಪರೀಕ್ಷಿಸಿದರು. ಅಡುಗೆ ಮನೆಯಲ್ಲಿ ಸ್ವಚ್ಛತೆ ಇಲ್ಲದ್ದಕ್ಕೆ ಗರಂ ಆದರು. ಫ್ರೀಜರ್ನಲ್ಲಿದ್ದ ಮಾಂಸ, ಮೀನು ಪರೀಕ್ಷಿಸಿದರು. ಕೃತಕ ಬಣ್ಣ ಬಳಕೆ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಲೇಬಲ್ ಇಲ್ಲದ ಸೋಡಾ ಮಾರಾಟಕ್ಕೆ ಇಟ್ಟಿರುವುದಕ್ಕೆ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಇನ್ಮುಂದೆ ಇಂತಹ ಉತ್ಪನ್ನ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಆಹಾರದ ಸ್ಯಾಂಪಲ್ ಪಡೆದು ಲ್ಯಾಬ್ಗೆ ರವಾನಿಸಿದ್ದಾರೆ. ನ್ಯೂನತೆ ಕಂಡು ಬಂದರೆ ಲೈಸೆನ್ಸ್ ರದ್ದುಗೊಳಿಸುವುದಾಗಿ ಎಚ್ಚರಿಸಿದರು.
ಸ್ಥಳ 3: ಲಕ್ಷ್ಮೀ ಕಾಂಡಿಮೆಂಟ್ಸ್
ಮಿಳಘಟ್ಟ ರಸ್ತೆಯ ಲಕ್ಷ್ಮೀ ಕಾಂಡಿಮೆಂಟ್ಸ್ಗೆ ಡಾ. ಮೈತ್ರಿ ನೇತೃತ್ವದ ತಂಡ ದಾಳಿ ನಡೆಸಿತು. ನಗರದ ವಿವಿಧ ಬೇಕರಿಗಳಿಗೆ ಇಲ್ಲಿಂದ ಸಿಹಿ ತಿಂಡಿ, ಖಾರ ಮಿಕ್ಷರ್ ಪೂರೈಕೆಯಾಗುತ್ತದೆ. ಸಿಹಿ ತಿಂಡಿಗಳಿಗೆ ಕೃತಕ ಬಣ್ಣ ಬಳಕೆ ಮಾಡುತ್ತಿರುವುದನ್ನು ಕಂಡು ಡಾ. ಮೈತ್ರಿ ಆಕ್ರೋಶಗೊಂಡರು. ಮಕ್ಕಳು ಸಿಹಿ ತಿಂಡಿ ಇಷ್ಟ ಪಟ್ಟು ತಿನ್ನುತ್ತಾರೆ. ನೀವು ಅವರಿಗೆ ವಿಷ ಕೊಡುತ್ತಿದ್ದೀರ ಎಂದು ಗರಂ ಆದರು. ಪಾಮ್ ಆಯಿಲ್ ಬಳಕೆ, ತಿಂಡಿ ತಯಾರಿಕೆಯಲ್ಲಿ ಸ್ವಚ್ಛತೆ ಕಾಪಾಡದಿರುವುದನ್ನು ಗಮನಕ್ಕೆ ಬಂತು. ಸ್ವಚ್ಛತೆ ಕಾಪಾಡದೆ ಇದ್ದರೆ ಕಾಂಡಿಮೆಂಟ್ಸ್ ಸೀಜ್ ಮಾಡುವುದಾಗಿ ಎಚ್ಚರಿಕೆ ನೀಡಲಾಯಿತು.
ಸ್ಥಳ 4: ಹೋಳಿಗೆ ಮನೆ
ದುರ್ಗಿಗುಡಿಯ ಹೋಳಿಗೆ ಮನೆ ಮೇಲು ದಾಳಿ ನಡೆಸಲಾಯಿತು. ಹೋಳಿಗೆಯ ಹೂರಣವನ್ನು ಸರಿಯಾಗಿ ಇಡದಿರುವುದು, ಉತ್ಪಾದನೆ ಕುರಿತ ಮಾಹಿತಿಯೇ ಇಲ್ಲದ ತುಪ್ಪದ ಬಾಟಲಿ, ಕೃತಕ ಬಣ್ಣ ಬಳಸಿರುವ ಚಕ್ಕುಲಿ ಪ್ಯಾಕೇಟ್ಗಳು, ತಿನಿಸು ಪ್ಯಾಕೇಟ್ಗಳ ಅವಧಿ ಮುಗಿಯುವ ಕುರಿತು ಮಾಹಿತಿಯೇ ಇರದ್ದಕ್ಕೆ ಉಪ ವಿಭಾಗಾಧಿಕಾರಿ ಡಾ. ಮೈತ್ರಿ ಆಕ್ರೋಶಗೊಂಡರು. ಕೂಡಲೆ ನ್ಯೂನತೆ ಸರಿಪಡಿಸಬೇಕು. ಇಲ್ಲವಾದಲ್ಲಿ ಲೈಸೆನ್ಸ್ ರದ್ದುಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.
‘ಒಂದೇ ನಿಮಿಷದಲ್ಲಿ ರದ್ದಾಗುತ್ತೆ ಲೈಸೆನ್ಸ್ʼ
ದಾಳಿ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಉಪ ವಿಭಾಗಾಧಿಕಾರಿ ಡಾ. ಮೈತ್ರಿ, ‘ಸಾರ್ವಜನಿಕರ ದೂರು ಹಿನ್ನೆಲೆ ಹೊಟೇಲ್ ತಾಜ್ ಮತ್ತು ಬ್ರೈಟ್ ಹೊಟೇಲ್ನಲ್ಲಿ ಪರಿಶೀಲಿಸಿದೆವು. ಎರಡು ಕಡೆ ನ್ಯೂನತೆ ಕಂಡು ಬಂದಿದೆ. ಅಸ್ವಚ್ಛತೆಯಲ್ಲಿ ಅಡುಗೆ ಮಾಡುವುದು, ಲೇಬಲ್ ಇಲ್ಲದ ಚಿಕನ್ ಪ್ಯಾಕೇಟ್ ಇರುವುದು, ಪಾಮ್ ಆಯಿಲ್ ಬಳಕೆ, ಲೇಬಲ್ ಇಲ್ಲದ ತುಪ್ಪ, ಬೆಣ್ಣೆ ಬಳಕೆ, ಟೇಸ್ಟಿಂಗ್ ಪೌಡರ್ ಬಳಕೆ ಮಾಡಿರುವುದು ಗಮನಕ್ಕೆ ಬಂದಿದೆ. ಗ್ರಾಹಕರನ್ನು ಸೆಳೆಯಲು ಟೇಸ್ಟಿಂಗ್ ಪೌಡರ್ ಬಳಸುತ್ತಿದ್ದಾರೆ. ಇದು ವಿಷಕಾರಿಯಾಗಿದ್ದು ಗ್ರಾಹಕರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಈಗ ಎಲ್ಲವನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಆದರೆ ಪರಿಸ್ಥಿತಿ ಹೀಗೆ ಮುಂದುವರೆದರೆ ಲೈಸೆನ್ಸ್ ರದ್ದಾಗಲಿದೆ. ಒಂದೇ ನಿಮಿಷದಲ್ಲಿ ಲೈಸೆನ್ಸ್ ರದ್ದುಗೊಳಿಸುತ್ತೇವೆʼ ಎಂದು ಎಚ್ಚರಿಸಿದರು.