ಶಿವಮೊಗ್ಗ ವಿಮಾನ ನಿಲ್ದಾಣ, ಡಿಸಿ ಕಚೇರಿಯಲ್ಲಿ ಶಾಸಕಿ ಸಭೆ, ರೈತರಿಗೆ ಪರಿಹಾರ ಕುರಿತು ಏನಂದ್ರು?

ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣಕ್ಕಾಗಿ ಜಮೀನು ಕಳೆದುಕೊಂಡ ರೈತರು ಹಾಗೂ ಭೂಮಾಲೀಕರಿಗೆ ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಜಮೀನು ಕಳೆದುಕೊಂಡಿರುವ ಕುಟುಂಬಗಳ ಸಮಸ್ಯೆಗಳು ಹಾಗೂ ಅವರಿಗೆ ತಲುಪಿಸಬೇಕಾದ ಪರಿಹಾರದ ಕುರಿತು ಜಿಲ್ಲಾಧಿಕಾರಿ ಜೊತೆಗೆ ಚರ್ಚಿಸಲಾಯಿತು.

ಅಭಿವೃದ್ಧಿ ಯೋಜನೆಗಳಿಗಾಗಿ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ ನಿಯಮಾನುಸಾರ ಸಿಗಬೇಕಾದ ಪರಿಹಾರ ಮೊತ್ತ ವಿಳಂಬವಿಲ್ಲದೆ ತಲುಪಬೇಕು. ಭೂಸ್ವಾಧೀನಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ, ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿ ಹಾಗೂ ಅರ್ಹ ಫಲಾನುಭವಿಗಳಿಗೆ ನ್ಯಾಯಸಮ್ಮತ ಪರಿಹಾರ ಕಲ್ಪಿಸಲು ಸಂಬಂಧಿಸಿದ ಇಲಾಖೆಗಳ ನಡುವೆ ಅಗತ್ಯ ಸಮನ್ವಯ ಸಾಧಿಸಬೇಕು ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ್ ಅಧಿಕಾರಿಗಳಿಗೆ ಸೂಚಿಸಿದರು.

MLA-Sharadha-Puryanaik-Holds-meeting-about-Land-lost-to-Shimoga-Airport

ವಿಮಾನ ನಿಲ್ದಾಣದಂತಹ ಯೋಜನೆಗಳು ಜಿಲ್ಲೆಯ ಪ್ರಗತಿಗೆ ಅಗತ್ಯವಾಗಿದ್ದರೂ, ಭೂಮಿ ಕಳೆದುಕೊಂಡ ರೈತರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸಂತ್ರಸ್ತ ಕುಟುಂಬಗಳ ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ಕ್ರಮ ಕೈಗೊಳ್ಳಲಾಗುವುದು

– ಶಾರದಾ ಪೂರ್ಯಾನಾಯ್ಕ್‌, ಶಾಸಕಿ

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಕಟ್ಟಿ, ತಹಶೀಲ್ದಾರ್ ರಾಜೀವ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.