ಫ್ಲಿಪ್‌ಕಾರ್ಟ್‌ಗೆ ದಂಡ ವಿಧಿಸಿದ ಶಿವಮೊಗ್ಗದ ಗ್ರಾಹಕರ ನ್ಯಾಯಾಲಯ, ಕಾರಣವೇನು?

ಶಿವಮೊಗ್ಗ: ಗ್ರಾಹಕರು ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಟಯ‌ರ್ ಬದಲು ಬೇರೆ ಮಾದರಿ ಟಯ‌ರ್ ಕಳುಹಿಸಿಕೊಟ್ಟು ಸೇವಾನ್ಯೂನ್ಯತೆ ಎಸಗಿದ ಕಾರಣಕ್ಕೆ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸಂಸ್ಥೆಗೆ ಆದೇಶಿಸಿದೆ. (ಶಿವಮೊಗ್ಗ ಲೈವ್‌.ಕಾಂ | ಮುಂದಿನ 5 ಪ್ಯಾರಾಗಳು ಕೆಳಗಿವೆ)

ಶಿವಮೊಗ್ಗದ ಸಿ.ಎ.ಮಹಬೂಬ್ ಮುದಾಸಿರ್ ಅವರು 2025ರ ಸೆ.12ರಂದು ಫ್ಲಿಪ್‌ಕಾರ್ಟ್ ಮೂಲಕ ₹2,211 ನೀಡಿ ಗುಡ್ ಇಯರ್ ಕಿಲ್ಲೆ ಟಯ‌ರ್ ಅನ್ನು ಕ್ಯಾಶ್ ಆನ್ ಡೆಲಿವರಿ ಮೂಲಕ ಬುಕ್ ಮಾಡಿದ್ದರು. ಆದರೆ ಸೆ.19ರಂದು ಸಂಸ್ಥೆಯು ಕಡಿಮೆ ಬೆಲೆಯ ಟಯರ್‌ ತಲುಪಿಸಿತ್ತು.

Shimoga-Consumer-Court.

ಇದನ್ನು ಗಮನಿಸಿದ ಮುದಾಸಿ‌ರ್ ಅವರು ತಪ್ಪಾಗಿ ಬಂದ ಟಯ‌ರ್ ವಾಪಸ್ ಕಳುಹಿಸಿ ಬುಕ್ ಮಾಡಿದ್ದ ಟಯರ್ ನೀಡುವಂತೆ ಕೋರಿದ್ದರು. ಆದರೆ ಸಂಸ್ಥೆಯವರು ಮತ್ತೆ ಅದೇ ತಪ್ಪಾದ ಟಯರ್ ಅನ್ನೇ ಕಳುಹಿಸಿಕೊಟ್ಟಿದ್ದರು. ಈ ಬಗ್ಗೆ ಇ-ಮೇಲ್ ಹಾಗೂ ಲೀಗಲ್ ನೋಟಿಸ್‌ ನೀಡಿದರೂ ಸೂಕ್ತ ಸ್ಪಂದನೆ ಸಿಗದಿದ್ದಾಗ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.

ದೂರುದಾರರು ಸಲ್ಲಿಸಿದ ದಾಖಲೆಗಳು ಹಾಗೂ ವಾದ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಹಾಗೂ ಸದಸ್ಯ ಬಿ.ಡಿ.ಯೋಗಾನಂದ ಅವರನ್ನೊಳಗೊಂಡ ಪೀಠ ಆಲಿಸಿತ್ತು. ಟಯರ್ ಬೆಲೆ ₹2,211 ಅನ್ನು 2025ರ ಅ.4 ರಿಂದ ಶೇ.9ರ ವಾರ್ಷಿಕ ಬಡ್ಡಿಯೊಂದಿಗೆ ಗ್ರಾಹಕರಿಗೆ ಪಾವತಿಸಬೇಕು. ಸೇವಾ ನ್ಯೂನ್ಯತೆ ಮತ್ತು ಮಾನಸಿಕ ಕಿರುಕುಳಕ್ಕಾಗಿ ₹25,000 ಪರಿಹಾರ ನೀಡಬೇಕು. ದೂರಿನ ಖರ್ಚು ವೆಚ್ಚವಾಗಿ ₹10,000 ಪಾವತಿಸಬೇಕು. ಈ ಆದೇಶವಾದ 45 ದಿನದೊಳಗೆ ಮೊತ್ತ ಪಾವತಿಸಬೇಕು. ತಪ್ಪಿದ್ದಲ್ಲಿ ಒಟ್ಟು ಮೊತ್ತಕ್ಕೆ ಶೇ.12ರಷ್ಟು ವಾರ್ಷಿಕ ಬಡ್ಡಿ ಸೇರಿಸಿ ಪೂರ್ಣ ಹಣ ಪಾವತಿಸುವವರೆಗೆ ನೀಡಬೇಕಾಗುತ್ತದೆ ಎಂದು ಆಯೋಗವು ಎಚ್ಚರಿಕೆ ನೀಡಿದೆ.