ಸೊರಬ: ಸೊರಬ-ಶಿರಾಳಕೊಪ್ಪ ಮುಖ್ಯ ರಸ್ತೆಯ ಛತ್ರದಹಳ್ಳಿ ಕೆರೆ ಏರಿ ಮೇಲೆ ಗುಂಡಿ ತಪ್ಪಿಸುಲು ಹೋಗಿ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಅಂತರವಳ್ಳಿ ನಿವಾಸಿ ಲೋಹಿತ್ (30), ಹಿರೇಕೇರೂರು ತಾಲೂಕಿನ ಸೀತೆಕೊಂಡ ಗ್ರಾಮದ ಕಿರಣ್‌ಕುಮಾರ್ (30) ಹಾಗೂ ಆಲಾದಗೇರಿ ಗ್ರಾಮದ ಶಾಂತವ್ವ (24) ಅಪಘಾತದಲ್ಲಿ ಗಾಯಗೊಂಡವರು. ಸೆಪ್ಟೆಂಬರ್ 29ರ ರಾತ್ರಿ ಲೋಹಿತ್ ಅವರು ತಮ್ಮ ಸ್ನೇಹಿತ ತರುಣ್ ಕುಮಾರ್ ಅವರ ಬೈಕ್‌ನಲ್ಲಿ ಕಿರಣ್‌ಕುಮಾರ್ ಹಾಗೂ ಶಾಂತವ್ವ ಅವರ ಜೊತೆಗೆ ಸೊರಬ ತಾಲೂಕಿನ ಸುತ್ತುಕೋಟೆ ಗ್ರಾಮದ ಸಂಬಂಧಿಕರ ಮನೆಗೆ ಹಬ್ಬಕ್ಕೆ ತೆರಳುತ್ತಿದ್ದರು.

ಛತ್ರದಹಳ್ಳಿ ಬಳಿ ಸೊರಬ ಕಡೆಯಿಂದ ಬಂದ ಕಾರು, ರಸ್ತೆ ಗುಂಡಿಗಳನ್ನು ತಪ್ಪಿಸಲು ಹೋಗಿ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್‌ನಲ್ಲಿದ್ದ ಮೂವರೂ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಲೋಹಿತ್ ಅವರ ಬಲಗಾಲಿನ ಮೂಳೆ ಮುರಿದು ಮುಖ ಹಾಗೂ ಎದೆಗೆ ಪೆಟ್ಟಾಗಿದ್ದರೆ, ಕಿರಣ್‌ಕುಮಾರ್ ಅವರ ಬಲಗಾಲಿಗೆ ತೀವ್ರ ಗಾಯವಾಗಿದೆ ಹಾಗೂ ಶಾಂತವ್ವ ಅವರ ಬಲಗಾಲು ಮತ್ತು ಮೈಕೈಗೆ ಪೆಟ್ಟಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.