ಶಿವಮೊಗ್ಗ: ಸಾಧು ಸಂತರು, ಮಠಾಧೀಶರ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲವಾದರೆ ಸಾಧು ಸಂತರು, ಮಠಾಧೀಶರ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ವೀರಶೈವ ಲಿಂಗಾಯತ ಸಮಾಜದ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಎಸ್. ಎಸ್.ಜ್ಯೋತಿಪ್ರಕಾಶ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನದಲ್ಲಿ ಪಂಚಪೀಠ ಸ್ವಾಮೀಜಿಗಳು ಹಾಗೂ ನೂರಾರು ಶಿವಾಚಾರ್ಯರ ಉಪಸ್ಥಿತಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ಆಡಿರುವ ಮಾತುಗಳು ಸಮಾಜದ ಭಕ್ತರ ಭಾವನೆಗೆ ತೀವ್ರ ನೋವುಂಟುಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್ ಅವರು ಮಠಗಳು ಮೂರು ಸಾವಿರ ಇರಲಿ, ಆರು ಸಾವಿರ ಇರಲಿ. ನಮ್ಮ ಸೇವೆ ಮಾಡಬೇಕು ಎಂದು ಹೇಳಿರುವುದು ಅವರ ದರ್ಪ ತೋರಿಸುತ್ತದೆ. ಮಠಾಧೀಶರ ಮೇಲಿನ ಗೌರವ ಶಾಶ್ವತವಾದುದು. ಸ್ವಾಮೀಜಿಗಳನ್ನು ರಾಯಭಾರಿ ಎನ್ನುವುದು, ಸೇವೆ ಮಾಡಿದರೆ ಮಾತ್ರ ಅಭಿವೃದ್ಧಿ ಹಾಗೂ ಮುಕ್ತಿ ಎಂಬಂತಹ ಮಾತುಗಳು ಯಾವುದೇ ಸನ್ನಿವೇಶದಲ್ಲೂ ಒಪ್ಪಲು ಸಾಧ್ಯವಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ರಾಜ್ಯಾದ್ಯಂತ ವೀರಶೈವ ಲಿಂಗಾಯತ ಸಮಾಜದಿಂದ ಹೋರಾಟ ರೂಪಿಸಲಾಗುವುದು ಎಂದರು.
ಒಕ್ಕೂಟದಿಂದ ಮನವಿ ಸಲ್ಲಿಕೆ
ರಾಜಕೀಯ ಅಧಿಕಾರ, ಅದರ ಜತೆಗೆ ಬರುವ ಸ್ಥಾನಮಾನ ಯಾವುದೂ ಶಾಶ್ವತವಲ್ಲ. ಆದರೆ ಸಿಎಂ ಮಠಾಧೀಶರ ಬಗ್ಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಒಕ್ಕೂಟದ ಪ್ರಮುಖರು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಮಠಗಳು ಮತ್ತು ಮಠಾಧೀಶರ ಮೇಲಿನ ಜನರ ಗೌರವ ಶಾಶ್ವತ. ಈ ಸಂದರ್ಭ ಎಸ್.ಎಸ್.ಜ್ಯೋತಿಪ್ರಕಾಶ್, ಬಳ್ಳಕೆರೆ ಸಂತೋಷ್, ರೇಣುಕಾರಾಧ್ಯ, ವಿರೂಪಾಕ್ಷಪ್ಪ, ಜಗದೀಶ್, ತಾರಾನಾಥ್, ಇ.ವಿಶ್ವಾಸ್, ಮರುಳೇಶ್, ಶಾಂತಾ ಆನಂದ್, ಮೋಹನ್, ಪಿ.ರುದ್ರೇಶ್, ಚನ್ನಬಸಪ್ಪ, ಪ್ರದೀಪ್ ಎಲಿ, ಮಂಗಳಾ ರವೀಂದ್ರ, ಸಚಿನ್ ಪೂಜಾರಿ ಇತರರಿದ್ದರು.