ಭದ್ರಾವತಿ: ಕೆ.ಇ.ಬಿ ಇಲಾಖೆಗೆ ಸೇರಿದ ಬ್ಯಾಟರಿ ಹಾಗೂ ಕಾಪರ್ ವೈರ್ ಕಳವು ಮಾಡಿದ್ದ ಆರೋಪಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ₹25,000 ದಂಡ ವಿಧಿಸಿ ತೀರ್ಪು ನೀಡಿದೆ.
ಬೊಮ್ಮನಕಟ್ಟೆ ವೃಕ್ಷೋದ್ಯಮದ ರಸ್ತೆಯ ಬದಿಯಲ್ಲಿ ಕೆ.ಇ.ಬಿ ಇಲಾಖೆಯಿಂದ ಅಳವಡಿಸಲಾಗಿದ್ದ 2 ಬ್ಯಾಟರಿ ಹಾಗೂ ಕಾಪರ್ ವೈರ್ಗಳು ಕಳ್ಳತನವಾಗಿದ್ದವು. ಈ ಸಂಬಂಧ ಮಂಜುನಾಥ್ (40) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಆಗಿನ ಇನ್ಸ್ಪೆಕ್ಟರ್ ಯೋಗೇಶ್ ಕೆ.ಎಂ. ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎನ್. ಮುನಿರಾಜು ಅವರು, ಆರೋಪಿ ಮಂಜುನಾಥ್ಗೆ ₹25,000 ದಂಡ ವಿಧಿಸಿದ್ದಾರೆ. ದಂಡದ ಮೊತ್ತ ಪಾವತಿಸಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಕಾರಾಗೃಹವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ. ವಾದ ಮಂಡಿಸಿದ್ದರು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.