ಶಿವಮೊಗ್ಗ: ನಗರದಲ್ಲಿ ವಾಹನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ನಗರದ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ ₹466.74 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 100 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ರಾಷ್ಟ್ರೀಯ ಹೆದ್ದಾರಿ-206 (ಹೊಸ ರಾಷ್ಟ್ರೀಯ ಹೆದ್ದಾರಿ-69) ರಲ್ಲಿ ಬಾಕಿ ಉಳಿದಿರುವ ಶಿವಮೊಗ್ಗ ನಗರ ಬೈಪಾಸ್ ಕಾಮಗಾರಿ ಪೂರ್ಣಗೊಳಿಸುವುದರ ಜೊತೆಗೆ, ನಗರ ವ್ಯಾಪ್ತಿಯಲ್ಲಿನ ಹಾಲಿ ನಾಲ್ಕು ಪಥದ ಹೆದ್ದಾರಿಯ ಮರು ಡಾಂಬರೀಕರಣ ಹಾಗೂ ಸುಧಾರಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ.

ಎಷ್ಟೆಷ್ಟು ಅನುದಾನ ಯಾವುದಕ್ಕೆ ಬಳಕೆ?
ಮಂಜೂರಾದ ₹466.74 ಕೋಟಿ ಮೊತ್ತವನ್ನು ಪ್ರಮುಖವಾಗಿ ಮೂರು ಭಾಗಗಳಾಗಿ ಬಳಸಲಾಗುತ್ತದೆ ಎಂದು ಸಂಸದ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚತುಷ್ಪಥ ಬೈಪಾಸ್ ರಸ್ತೆ, ಅಂಡರ್ಪಾಸ್
ಹೊಸದಾಗಿ ಅನುಮೋದಿಸಲಾದ ಪಥ ನಕ್ಷೆಯಂತೆ ಹರಿಗೆಯಿಂದ ಪೊದಾರ್ ಶಾಲೆಯ ಪಕ್ಕದಿಂದ ವಿಮಾನ ನಿಲ್ದಾಣ ರಸ್ತೆಯ ಮೂಲಕ ಊರುಗಡೂರುವರೆಗೆ ಸುಮಾರು 4.74 ಕಿ.ಮೀ. ಉದ್ದದ ನಾಲ್ಕು ಪಥದ ಬೈಪಾಸ್ ರಸ್ತೆ ನಿರ್ಮಿಸಲಾಗುತ್ತದೆ. ಈ ಕಾಮಗಾರಿ ಅಡಿ ಅಂಡರ್ಪಾಸ್ ಸೇರಿ ಸಂಬಂಧಿತ ರಸ್ತೆ ಮೂಲಸೌಕರ್ಯಗಳನ್ನು ಕೈಗೊಳ್ಳಲಾಗುತ್ತದೆ. ಇದಕ್ಕೆ ₹219.74 ಕೋಟಿ ಬಳಕೆಯಾಗಲಿದೆ.
ಭೂಸ್ವಾಧೀನ ಹಾಗೂ ಯುಟಿಲಿಟಿ ಸ್ಥಳಾಂತರ
ಬೈಪಾಸ್ ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಹಾಗೂ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗುವ ವಿವಿಧ ಯುಟಿಲಿಟಿಗಳನ್ನು ಸ್ಥಳಾಂತರಿಸುವ ಕಾರ್ಯಗಳಿಗೆ ₹230 ಕೋಟಿ ಮೀಸಲಿಡಲಾಗಿದೆ.
ಹೆದ್ದಾರಿ ಮರು ಡಾಂಬರೀಕರಣ
ಎಂ.ಆರ್.ಎಸ್. ವೃತ್ತದಿಂದ ಬೈಪಾಸ್ ಮಾರ್ಗವಾಗಿ ಸಂದೇಶ ಮೋಟಾರ್ಸ್, ಬಸ್ಸ್ಟ್ಯಾಂಡ್ ವೃತ್ತ, ಹಾಲ್ಕೊಳ ವೃತ್ತ, ಗಾಡಿಕೊಪ್ಪದ ಮೂಲಕ ಶ್ರೀರಾಂಪುರದವರೆಗೆ ಸಾಗುವ ಸುಮಾರು 12 ಕಿ.ಮೀ. ಉದ್ದದ ನಾಲ್ಕು ಪಥದ ರಸ್ತೆಗೆ ₹17 ಕೋಟಿ ವೆಚ್ಚದಲ್ಲಿ ಮರು ಡಾಂಬರೀಕರಣ ಹಾಗೂ ಅಗತ್ಯ ಸುಧಾರಣಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.
ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸುವ ಭಾರಿ ವಾಹನಗಳ ದಟ್ಟಣೆ ನಿಯಂತ್ರಿಸಲು ಈ ಬೈಪಾಸ್ ರಸ್ತೆ ಪ್ರಮುಖ ಪಾತ್ರ ವಹಿಸಲಿದೆ. ಪ್ರಯಾಣದ ಸಮಯ ಕಡಿಮೆಯಾಗುವುದರ ಜೊತೆಗೆ ಪ್ರಮುಖ ವೃತ್ತಗಳ ಮೇಲಿನ ಸಂಚಾರ ಒತ್ತಡ ತಗ್ಗಿ ರಸ್ತೆ ಸುರಕ್ಷತೆ ಮತ್ತಷ್ಟು ಸುಧಾರಿಸಲಿದೆ. ಮಲೆನಾಡಿನ ವ್ಯಾಪಾರ, ಕೈಗಾರಿಕೆ, ಕೃಷಿ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
– ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ
ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಲಹಾ ಸಮಿತಿ ಸದಸ್ಯರಾಗಿರುವ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅನುದಾನ ಮಂಜೂರು ಮಾಡುವಂತೆ ಹಲವು ಹಂತಗಳಲ್ಲಿ ಮನವರಿಕೆ ಮಾಡಿಕೊಟ್ಟಿದ್ದರು. ಸಂಸದರ ಸತತ ಪ್ರಯತ್ನದ ಫಲವಾಗಿ ಇದೀಗ ಈ ಬೃಹತ್ ಅನುದಾನ ಲಭಿಸಿದೆ ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.