ಶಿವಮೊಗ್ಗ: ಈ ಬಾರಿ ಶಿವಮೊಗ್ಗ ದಸರಾವನ್ನು ಹಿರಿಯ ನಟ ಶ್ರೀನಾಥ್ ಉದ್ಘಾಟಿಸುತ್ತಿದ್ದಾರೆ. ಅಕ್ಟೋಬರ್ 11ರಂದು ನಾಡಹಬ್ಬಕ್ಕೆ ಚಾಲನೆ ದೊರೆಯಲಿದೆ.
ಮಹಾನಗರ ಪಾಲಿಕೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ, ಅ.11ರಂದು ಬೆಳಿಗ್ಗೆ ಮಹಾನಗರ ಪಾಲಿಕೆ ಆವರಣದಿಂದ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದವರೆಗೆ ನಾಡ ದೇವಿ ಚಾಮುಂಡೇಶ್ವರಿಯ ಬೆಳ್ಳಿ ಮೂರ್ತಿ ಮತ್ತು ಮಂಟಪದ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ದೇವಸ್ಥಾನದ ಆವರಣದಲ್ಲಿ ದಸರಾ ಉತ್ಸವಕ್ಕೆ ಚಾಲನೆ ದೊರೆಯಲಿದೆ.

ನಟ ಶ್ರೀನಾಥ್ ಅವರು ಈ ಬಾರಿಯ ದಸರಾ ಉದ್ಘಾಟನೆ ನೆರವೇರಿಸಲಿದ್ದಾರೆ. ಹಲವು ಗಣ್ಯರು ಅಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಕ್ರೆಬೈಲಿನಿಂದ ಮೂರು ಆನೆಗಳು
ಅ.21ರಂದು ಅದ್ಧೂರಿ ಅಂಬಾರಿ ಉತ್ಸವ ನಡೆಯಲಿದೆ. ಶಿವಪ್ಪನಾಯಕ ಅರಮನೆಯಿಂದ ಜಂಬೂ ಸವಾರಿ ನಡೆಯಲಿದೆ. ಸಕ್ರೆಬೈಲು ಆನೆ ಬಿಡಾರದ ಸಾಗರ್ ಆನೆ ಅಂಬಾರಿ ಹೊರಲಿದೆ. ಬಹದ್ದೂರ್ ಮತ್ತು ಸೋಮಣ್ಣ ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಶಿವಮೊಗ್ಗ ದಸರಾಗೆ ನೆರವು ಕೇಳಿದಾಗ ಮುಖ್ಯಮಂತ್ರಿ ಡಿ.ಕೆ.ಶಿಕುಮಾರ್ ಅವರು ತಕ್ಷಣಕ್ಕೆ ₹50 ಲಕ್ಷ ಮಂಜೂರು ಮಾಡಿ ಆದೇಶಿಸಿದರು. ಅಂಬಾರಿ ಮೆರವಣಿಗೆಗೆ ಆನೆಗಳು ಬೇಕು ಎಂದು ಮನವಿ ಮಾಡಿದ ಕೂಡಲೆ ಅರಣ್ಯ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಕೂಡಲೆ ಮೂರು ಆನೆಗಳನ್ನು ನೀಡುವಂತೆ ಆದೇಶಿಸಿದರು.
– ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ಶಾಸಕ
ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ವಿವಿಧ ದಸರಾ ಸಮಿತಿಗಳ ಕಾರ್ಯದರ್ಶಿಗಳು ಇದ್ದರು.