ಶಿವಮೊಗ್ಗದಲ್ಲಿ ಎರಡು ದಿನ ನೀನಾಸಂ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕ ಇರುತ್ತೆ?

ಶಿವಮೊಗ್ಗ: 26 ವರ್ಷಗಳಿಂದ ಶಿವಮೊಗ್ಗದಲ್ಲಿ ನೀನಾಸಂ ತಿರುಗಾಟದ ನಾಟಕಗಳನ್ನು ಆಯೋಜಿಸುತ್ತಿರುವ ನಮ್ ಟೀಮ್ ವತಿಯಿಂದ ಅ.8 ಮತ್ತು 9ರಂದು ನಗರದ ಕುವೆಂಪು ರಂಗಮಂದಿರದಲ್ಲಿ ನೀನಾಸಂ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ದಿನ ಸಂಜೆ 7ಕ್ಕೆ ನಾಟಕಗಳು ಪ್ರದರ್ಶನಗೊಳ್ಳಲಿವೆ. ಅ.8ರಂದು ಶಂಕರ ಗೌಡ ರಚನೆಯ ಪಾದುಕಾ ಕಿರೀಟಿ ನಾಟಕವನ್ನು ಮಂಜು ಕೊಡಗು ನಿರ್ದೇಶಿಸಿದ್ದಾರೆ. ಅ.9ರಂದು ಮಹೇಶ್ ಎಲ್ಕುಂಚ್ವಾರ್ ರಚನೆಯ ಕೊಳ ನಾಟಕ ಪ್ರದರ್ಶನಗೊಳ್ಳಲಿದೆ. ನಂದಿನಿ ಕೆ.ಆರ್. ಹಾಗೂ ಪ್ರಶಾಂತ್ ಹಿರೇಮಠ ಕನ್ನಡಕ್ಕೆ ಅನುವಾದಿಸಿರುವ ಈ ನಾಟಕವನ್ನು ಮಂಜು ಕಾಸರಗೋಡು ನಿರ್ದೇಶಿಸಿದ್ದಾರೆ ಎಂದರು.

Neenasam-Natakotsava-in-Shimoga-by-Nam-Team-said-Honnali-Chandrashekar

ರಾಮನ ಪಟ್ಟಾಭಿಷೇಕದ ಸಿದ್ಧತೆಯ ನಡುವೆ ಕೈಕೆಯ ಎರಡು ವರಗಳ ಬೇಡಿಕೆ, ರಾಮನ ವನವಾಸ, ದಶರಥನ ಮರಣ ಹಾಗೂ ಭರತನು ರಾಮನನ್ನು ಅಯೋಧ್ಯೆಗೆ ಮರಳಿ ಕರೆತರಲು ನಡೆಸುವ ಪ್ರಯತ್ನಗಳು ಪಾದುಕಾ ಕಿರೀಟಿ ನಾಟಕದ ಕಥಾವಸ್ತು. ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಯ ಪ್ರಭಾವದೊಂದಿಗೆ ಭಾಸನ ಪ್ರತಿಮಾ ನಾಟಕದ ಕೆಲವು ಸಂಗತಿಗಳ ಹೋಲಿಕೆಯೂ ನಾಟಕದಲ್ಲಿದೆ. ಪಾತ್ರಗಳ ಆತ್ಮನಿರೂಪಣೆಯ ಮೂಲಕ ಕರ್ತವ್ಯ, ವಿಧಿ ಹಾಗೂ ವೈಯಕ್ತಿಕ ಆಶಯಗಳ ಸಂಘರ್ಷವನ್ನು ನಾಟಕ ಕಟ್ಟಿಕೊಡುತ್ತದೆ ಎಂದು ಹೊನ್ನಾಳಿ ಚಂದ್ರಶೇಖರ್‌ ತಿಳಿಸಿದರು.

ಕೊಳ ನಾಟಕದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ, ಜಾತಿ ವ್ಯವಸ್ಥೆ, ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ, ಜಮೀನುದಾರಿ ವ್ಯವಸ್ಥೆಯ ಕುಸಿತ, ಹೊಸ ವಾಣಿಜ್ಯ ಯುಗದ ಒತ್ತಡ ಹಾಗೂ ಮಹಿಳೆಯರ ಸ್ಥಾನಮಾನ ಸೇರಿದಂತೆ ಹಲವು ವಿಚಾರಗಳು ಪ್ರತಿಬಿಂಬಿತವಾಗುತ್ತವೆ. ಕುಟುಂಬದ ಸಂಬಂಧಗಳ ಸಂಕೀರ್ಣತೆ, ತಲೆಮಾರುಗಳ ಸಂಘರ್ಷ, ಸಂಪ್ರದಾಯ ಮತ್ತು ಆಧುನಿಕ ಮನೋಭಾವದ ನಡುವಿನ ತೊಳಲಾಟವನ್ನು ನಾಟಕ ತೆರೆದಿಡುತ್ತದೆ ಎಂದರು.

ಒಂದು ನಾಟಕ ವೀಕ್ಷಣೆಗೆ ₹75 ಹಾಗೂ ಎರಡೂ ನಾಟಕಗಳ ವೀಕ್ಷಣೆಗೆ ₹100 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಯಾವುದೇ ವೇದಿಕೆ ಕಾರ್ಯಕ್ರಮ ಇರುವುದಿಲ್ಲ ಎಂದು ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು. ದೂರವಾಣಿ ಸಂಖ್ಯೆ: 9844518866 ಸಂಪರ್ಕಿಸಬಹುದು. ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಸಮನ್ವಯ ಕಾಶಿ, ಸದಸ್ಯರಾದ ವೈದ್ಯನಾಥ ಹಾಗೂ ನಂದಿನಿ ಸಾಗರ ಇದ್ದರು.