ಚಿಕ್ಕ ಕೂಡ್ಲಿ ರಸ್ತೆ ಬಂದ್‌ ಮಾಡಿದ ಗ್ರಾಮಸ್ಥರು, ಮುಂದೆ ಹೆದ್ದಾರಿ ತಡೆಯುವ ಎಚ್ಚರಿಕೆ, ಕಾರಣವೇನು?

ಶಿವಮೊಗ್ಗ: ತುಂಗಾ–ಭದ್ರಾ ನದಿಗಳಿಗೆ ಅಣೆಕಟ್ಟು ನಿರ್ಮಾಣದ ಸಂದರ್ಭ 1960ರಿಂದ 1965ರ ಅವಧಿಯಲ್ಲಿ ಸ್ಥಳಾಂತರಗೊಂಡ ಶಿವಮೊಗ್ಗ ತಾಲ್ಲೂಕಿನ 25 ಗ್ರಾಮಗಳ ನಿವಾಸಿಗಳಿಗೆ ಸುಮಾರು 65 ವರ್ಷ ಕಳೆದರೂ ಆಸ್ತಿಯ ಹಕ್ಕುಪತ್ರ ದೊರೆತಿಲ್ಲ. ಕೂಡಲೆ ಹಕ್ಕುಪತ್ರ ಮಂಜೂರು ಮಾಡುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಶಿವಮೊಗ್ಗ ತಾಲ್ಲೂಕಿನ ಚಿಕ್ಕಕೂಡ್ಲಿ ಗ್ರಾಮದ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಸರ್ಕಾರದ ಆದೇಶದಂತೆ ಸ್ಥಳಾಂತರಗೊಂಡ ಕುಟುಂಬಗಳು ಇಂದಿಗೂ ತಮ್ಮ ಆಸ್ತಿ ಹಕ್ಕು ಪಡೆಯಲು ಕಚೇರಿಗಳಿಗೆ ಅಲೆಯುವ ಸ್ಥಿತಿ ಇದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Villagers-blocked-the-Chikka-Kudli-road-in-Shimoga-taluk

ಅಣೆಕಟ್ಟು ನಿರ್ಮಾಣದ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿದ್ದ ಜನವಸತಿ ಪ್ರದೇಶಗಳ 25 ಗ್ರಾಮಗಳನ್ನು ನದಿಗಳಿಂದ ದೂರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು. ಅಂದು ಸರ್ಕಾರದ ಭರವಸೆ ಹಾಗೂ ಆದೇಶವನ್ನು ನಂಬಿ ಮನೆ, ಜಮೀನು ಮತ್ತು ಮೂಲ ನೆಲವನ್ನು ತೊರೆದು ಹೊಸ ಪ್ರದೇಶಗಳಲ್ಲಿ ಗ್ರಾಮಸ್ಥರು ನೆಲೆಸಿದ್ದರು. ಆದರೆ ಸ್ಥಳಾಂತರಗೊಂಡು ಹಲವು ದಶಕಗಳು ಕಳೆದರೂ ವಾಸಿಸುತ್ತಿರುವ ಜಮೀನಿನ ಹಕ್ಕುಪತ್ರ ಮಾತ್ರ ದೊರೆತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಭೂಸ್ವಾಧೀನ ಸಂಬಂಧ ನೋಟಿಫಿಕೇಷನ್ ಹಾಗೂ ದಾಖಲೆಗಳಿವೆ. ಹೀಗಾಗಿ ಹೊಸದಾಗಿ ನೋಟಿಫಿಕೇಷನ್ ಹೊರಡಿಸುವ ಅಗತ್ಯವಿಲ್ಲ. ಭೂಸ್ವಾಧೀನ ಪ್ರಕ್ರಿಯೆಯನ್ನೂ ಹೊಸದಾಗಿ ಕೈಗೊಳ್ಳಬೇಕಿಲ್ಲ. ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ಗುರುತಿಸಿ, ಸರ್ವೆ ನಡೆಸಿ, ಗಡಿ ನಿಗದಿಪಡಿಸಿ ಅರ್ಹ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಹೆದ್ದಾರಿ ತಡೆಯುವ ಎಚ್ಚರಿಕೆ

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕೂಡ್ಲಿಯ ಯುವ ಮುಖಂಡ ಶ್ರೀನಿವಾಸ್‌ ಅಯ್ಯರ್‌, ಸಮಸ್ಯೆ ಬಗೆಹರಿಸುವಂತೆ ಮಾರ್ಚ್ 27, 2026ರಂದು ಜಿಲ್ಲಾಧಿಕಾರಿಗೆ ದಾಖಲೆ ಸಹಿತ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಗೂ ಮನವಿ ನೀಡಲಾಗಿದೆ. ಹಳೆಯ ದಾಖಲೆಗಳನ್ನು ಪರಿಶೀಲಿಸಿ, ಸಂಬಂಧಿಸಿದ ಸರ್ವೆ ನಂಬರ್‌ಗಳನ್ನು ಗುರುತಿಸಿ, ಜಮೀನಿನ ಗಡಿ ನಿಗದಿಪಡಿಸುವ ಪ್ರಕ್ರಿಯೆ ನಡೆಯಬೇಕಿದೆ. ಆದರೆ ಮನವಿ ಸಲ್ಲಿಸಿ ಆರು ತಿಂಗಳು ಕಳೆದರೂ ಪ್ರಗತಿ ಕಂಡುಬಂದಿಲ್ಲ. ಇದೇ ರೀತಿ ಅಸಡ್ಡೆ ಮುಂದುವರೆದರೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಹೊಳಲೂರು ಹೋಬಳಿಯ ಚಿಕ್ಕೂಡ್ಲಿ, ಅಬ್ಬರಘಟ್ಟ, ಜಾವಳ್ಳಿ, ಪಿಳ್ಳಂಗಿರಿ, ಹೊಯ್ಸನಹಳ್ಳಿ, ಹೊಳೆಬೆನವಳ್ಳಿ, ಶೆಟ್ಟಿಹಳ್ಳಿ, ಹಾರೋಬೆನವಳ್ಳಿ, ಬುಳ್ಳಾಪುರ, ಗೋಂದಿಚಟ್ನಳ್ಳಿ, ಹೊಳೆಹಟ್ಟಿ, ಮಡಿಕೆಚೀಲೂರು, ಹೊಳೆಹನಸವಾಡಿ, ಕಾಟೀಕೆರೆ, ಗುಡ್ರುಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳು ಸ್ಥಳಾಂತರಗೊಂಡ ಗ್ರಾಮಗಳಾಗಿವೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಉಪ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಗಣೇಶ್‌ ಪಿಳ್ಳಂಗಿರಿ, ಶ್ರೀಕಾಂತ್‌ ಅಬ್ಬರಘಟ್ಟ, ಮಂಜುನಾಥ ಚಿಕ್ಕಕೂಡ್ಲಿ, ಮಿಥುನ್‌ ಪಿಳ್ಳಂಗಿರಿ, ಪ್ರಭಾಕರ, ಸುರೇಶ್‌ ಸೇರಿ ಚಿಕ್ಕ ಕೂಡ್ಲಿ, ಅಬ್ಬರಘಟ್ಟ, ಪಿಳ್ಳಂಗಿರಿ, ಜಾವಳ್ಳಿ, ಹೊಯ್ಸನಹಳ್ಳಿ, ಕಾಟೇಕೆರೆ, ಶೆಟ್ಟಿಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.