ಕರ್ನಾಟಕ ಸಂಘದ ಪುಸ್ತಕ ಬಹುಮಾನ ಪ್ರಶಸ್ತಿ ಪ್ರಕಟ, ಯಾವೆಲ್ಲ ಪುಸ್ತಕಕ್ಕೆ ಪ್ರಶಸ್ತಿ ಲಭಿಸಿದೆ?

ಶಿವಮೊಗ್ಗ: ಕರ್ನಾಟಕ ಸಂಘದ 2025ನೇ ಸಾಲಿನ ಪುಸ್ತಕ ಬಹುಮಾನಕ್ಕೆ 12 ವಿವಿಧ ಪ್ರಕಾರಗಳ ಕೃತಿಗಳು ಆಯ್ಕೆಯಾಗಿವೆ. ವಿಜೇತರಿಗೆ ತಲಾ ₹10,000 ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್‌ನಲ್ಲಿ ಕರ್ನಾಟಕ ಸಂಘದ ಹಸೂಡಿ ವೆಂಕಟಶಾಸ್ತ್ರಿ ಸಾಹಿತ್ಯ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದರು.

Shimoga-karnataka-Sangha-gets-Rajyotsava-Award.webp

ಕರ್ನಾಟಕ ಸಂಘವು 1994ರಿಂದ ಪುಸ್ತಕ ಬಹುಮಾನ ನೀಡುತ್ತಿದ್ದು, 2025ರಲ್ಲಿ ಪ್ರಕಟವಾದ ಕೃತಿಗಳನ್ನು ಬಹುಮಾನಕ್ಕೆ ಆಹ್ವಾನಿಸಲಾಗಿತ್ತು. ಆಯ್ಕೆ ಸಮಿತಿಯು ಕೃತಿಗಳನ್ನು ಪರಿಶೀಲಿಸಿ ಪ್ರತಿ ವಿಭಾಗದಲ್ಲಿ ಒಂದೊಂದು ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಹೇಳಿದರು.

##ಪ್ರಶಸ್ತಿ ಪಡೆದವರ ವಿವರ

ಕಾದಂಬರಿ ವಿಭಾಗದಲ್ಲಿ ಕುವೆಂಪು ಹೆಸರಿನ ಪ್ರಸ್ತಿಗೆ ಸುಮಂಗಲಾ ಅವರ  ‘ಎನ್ನಾತ್ಮ ಕಂಪಮಿದು’ ಕೃತಿ, ಅನುವಾದ ವಿಭಾಗದಲ್ಲಿ ಎಸ್.ವಿ. ಪರಮೇಶ್ವರ ಭಟ್ಟರ ಹೆಸರಿನ ಪ್ರಶಸ್ತಿಗೆ ಬಸು ಬೇವಿನಗಿಡದ ಅವರ ‘ಲೈಟ್ ಹೌಸ್’, ಮಹಿಳಾ ಲೇಖಕರ ಕೃತಿಗೆ ಎಂ.ಕೆ. ಇಂದಿರಾ ಹೆಸರಿನಲ್ಲಿ ಕೊಡುವ ಪ್ರಶಸ್ತಿಗೆ ಉಷಾ ನರಸಿಂಹನ್ ಅವರ ‘ಆರ್ಯಾವರ್ತ’, ಮುಸ್ಲಿಂ ಲೇಖಕರ ವಿಭಾಗದಲ್ಲಿ  ಪಿ.ಲಂಕೇಶ್ ಹೆಸರಿನಲ್ಲಿ ಕೊಡುವ ಬಹುಮಾನವನ್ನು ಪ್ರೊ. ಫಹಾರ್ನಾಜ್ ಮಸ್ಕಿ ಅವರ ‘ಮಂಕ್ರಿ’ ಕೃತಿಗೆ, ಕವನ ಸಂಕಲನ ವಿಭಾಗದದಲ್ಲಿ ಜಿ.ಎಸ್. ಶಿವರುದ್ರಪ್ಪ ಅವರ ಹೆಸರಿನ ಪ್ರಶಸ್ತಿಗೆ ಸದಾಶಿವ ಸೊರಟೂರು ಅವರ ‘ದೇವರನ್ನು ಹೊರಹಾಕುತ್ತೇನೆ’ ಕೃತಿಗೆ, ಅಂಕಣ ಬರಹ ವಿಭಾಗದಲ್ಲಿ  ಹಾ.ಮಾ. ನಾಯಕ ಹೆಸರಿನಲ್ಲಿ ಕೊಡುವ ಪ್ರಶಸ್ತಿಗೆ ಮಲ್ಲಿಕಾರ್ಜುನ ಹೆಗ್ಗಳಗಿ ಅವರ ‘ಕಂಡದ್ದು ಕಂಡಹಾಗೆ’ ಕೃತಿಗೆ ನೀಡಲಾಗಿದೆ.

ಸಣ್ಣಕಥೆ ವಿಭಾಗದಲ್ಲಿ ಯು.ಆರ್. ಅನಂತಮೂರ್ತಿ ಹೆಸರಲ್ಲಿ ಕೊಡುವ ಪ್ರಸ್ತಿಗೆ ರಘುನಾಥ ಚ. ಹ. ಅವರ ‘ಇಲ್ಲಿಂದ ಮುಂದೆಲ್ಲ ಕಥೆ’ ಕೃತಿಗೆ, ನಾಟಕ ವಿಭಾಗದಲ್ಲಿ ಕೆ.ವಿ. ಸುಬ್ಬಣ್ಣ ಹೆಸರಿನ ಪ್ರಶಸ್ತಿಗೆ ಬೇಲೂರು ರಘುನಂದನ್ ಅವರ ‘ಶರ್ಮಿಷ್ಠೆ’ ಕೃತಿಗೆ, ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಹೆಸರಿನ ಪ್ರಶಸ್ತಿಗೆ ನಿವೃತ್ತ ಐಜಿಪಿ ಡಾ. ಡಿ.ವಿ. ಗುರುಪ್ರಸಾದ್ ಅವರ ‘ಸಿಲ್ಕ್ ರೂಟ್’ ಕೃತಿಗೆ, ವಿಜ್ಞಾನ ಸಾಹಿತ್ಯದಲ್ಲಿ ಹಸೂಡಿ ವೆಂಕಟಶಾಸ್ತ್ರಿ ಹೆಸರಿನ ಪ್ರಶಸ್ತಿಗೆ ಕೊಳ್ಳೇಗಾಲ ಶರ್ಮಾ ಅವರ ‘ಬೆರಗಿನ ಬಾಗಿಲು’ ಕೃತಿ, ಮಕ್ಕಳ ಸಾಹಿತ್ಯದಲ್ಲಿ ನಾ.ಡಿಸೋಜಾ ಅವರ  ಹೆಸರಿನ ಪ್ರಶಸ್ತಿಗೆ ಡಾ. ಕನಕಮಾಲಿನಿ ಅವರ ‘ಚುಕ್ಕಿಲೋಕದ ಚಕ್ಕಡಿ’ ಕೃತಿ ಮತ್ತು ವೈದ್ಯ ಸಾಹಿತ್ಯದಲ್ಲಿ ಡಾ.ಎಚ್.ಡಿ. ಚಂದ್ರಪ್ಪಗೌಡ ಅವರ ಹೆಸರಿನ ಪ್ರಶಸ್ತಿಗೆ ಶಿವಮೊಗ್ಗ ಪಶುವೈದ್ಯ ಕಾಲೇಜಿನ ಡಾ.ಶ್ರೀಧರ್ ಎನ್.ಬಿ. ಅವರ ‘ಪಶುವೈದ್ಯನ ಪಯಣ’ ಕೃತಿಗೆ ಪ್ರಶಸ್ತಿ ಲಭಿಸಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಡಾ. ನಾಗಮಣಿ, ಕಾರ್ಯದರ್ಶಿ ವಿನಯ ಶಿವಮೊಗ್ಗ, ಆರ್. ಎಸ್.ಹಾಲಸ್ವಾಮಿ, ವಾಗೀಶ್, ಡಾ.ಗುರುದತ್ತ, ಚೇತನ್, ದಿನೇಶ್ ಇದ್ದರು.