ಭದ್ರಾವತಿಯ ಹೊಟೇಲ್‌ ಮೇಲೆ ಡಾ. ಮೈತ್ರಿ ದಾಳಿ, ಖಡಕ್‌ ಎಚ್ಚರಿಕೆ, ಏನದು?

ಭದ್ರಾವತಿ: ನಗರದ ಬಸ್ ನಿಲ್ದಾಣ ಸಮೀಪದ ಪದ್ಮ ನಿಲಯ ಹೋಟೆಲ್‌ಗೆ ಶಿವಮೊಗ್ಗ ಉಪ ವಿಭಾಗಾಧಿಕಾರಿ ಡಾ. ಹೆಚ್.ಪಿ.ಎಸ್. ಮೈತ್ರಿ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಹಾರ ಸುರಕ್ಷತೆ ಹಾಗೂ ನೈರ್ಮಲ್ಯ ಲೋಪ ಕಂಡುಬಂದ ಹಿನ್ನೆಲೆ ಹೋಟೆಲ್ ಮಾಲೀಕನನ್ನು ತರಾಟೆಗೆ ತೆಗೆದುಕೊಂಡರು. (ಈ ಸುದ್ದಿಯನ್ನು ಇನ್ನು 42 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಹೋಟೆಲ್‌ನ ಅಡುಗೆ ಮನೆ ತಪಾಸಣೆ ನಡೆಸಿದಾಗ ಕೊಳೆತ ಹಣ್ಣುಗಳು, ಅವಧಿ ಮುಗಿದ ತಿನಿಸು ಹಾಗೂ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಅಲ್ಲದೆ, ಆಹಾರ ಪದಾರ್ಥಗಳನ್ನು ನಿಯಮಾನುಸಾರ ಸಂಗ್ರಹಿಸದೇ ಇರುವುದು ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು ಕಂಡುಬಂದಿದೆ.

Shivamogga-Assistant-Commissioner-raid-on-Bhadravathi-Hotel

ಗ್ರಾಹಕರಿಗೆ ಕಾಣಿಸುವಂತೆ ಪ್ರದರ್ಶಿಸಬೇಕಾದ ಎಫ್‌ಎಸ್‌ಎಸ್‌ಎಐ ಪ್ರಮಾಣಪತ್ರ ಹಾಗೂ ಅಗತ್ಯ ವ್ಯಾಪಾರ ಪರವಾನಗಿ ಪತ್ರಗಳನ್ನು ಹೋಟೆಲ್‌ನಲ್ಲಿ ಪ್ರದರ್ಶಿಸಿರಲಿಲ್ಲ. ಇದಕ್ಕೆ ಡಾ. ಮೈತ್ರಿ ಅಸಮಾಧಾನ ವ್ಯಕ್ತಪಡಿಸಿದರು. ಪರವಾನಗಿ ಪತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ನಿರ್ದೇಶನ ನೀಡಿದರು. ಲೋಪಗಳನ್ನು ಸರಿಪಡಿಸಿಕೊಳ್ಳಲು ಒಂದು ವಾರದ ಕಾಲಾವಕಾಶ ನೀಡಿದರು. ನಿಗದಿತ ಅವಧಿಯೊಳಗೆ ಲೋಪಗಳನ್ನು ಸರಿಪಡಿಸಿಕೊಳ್ಳದಿದ್ದರೆ ಹೋಟೆಲ್ ಅನ್ನು ಸೀಜ್ ಮಾಡಿ ಕ್ರಮ ಜರುಗಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ಡಾ. ಹೆಚ್.ಪಿ.ಎಸ್. ಮೈತ್ರಿ ಎಚ್ಚರಿಕೆ ನೀಡಿದ್ದಾರೆ.