ಶಿವಮೊಗ್ಗ: ವರದಕ್ಷಿಣೆ ಕಿರುಕುಳಕ್ಕೆ ನವವಧು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಪತಿ ಹಾಗೂ ಅತ್ತೆಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಹಾಲುಗುಡ್ಡೆ ಗ್ರಾಮದ ಜ್ಯೋತಿ (24) ಅವರು 2021ರ ಮೇ 23ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೆಚ್ಚುವರಿ ವರದಕ್ಷಿಣೆಗಾಗಿ ಜ್ಯೋತಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪದಡಿ ಪತಿ ದಯಾನಂದ್ (37) ಹಾಗೂ ಅತ್ತೆ ಸುಮಿತ್ರಾ (65) ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

10 ವರ್ಷ ಜೈಲು, ₹2.24 ಲಕ್ಷ ದಂಡ
ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಡಿವೈಎಸ್ಪಿ ಶಾಂತವೀರ್ ಇ. ನೇತೃತ್ವದಲ್ಲಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಯಶವಂತ ಕುಮಾರ್ ಅವರು ಆರೋಪ ಸಾಬೀತಾದ ಹಿನ್ನೆಲೆ ಇಬ್ಬರಿಗೂ ತಲಾ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ. ಇದರೊಂದಿಗೆ ಒಟ್ಟು ₹2.24 ಲಕ್ಷ ದಂಡ ವಿಧಿಸಿದ್ದು, ದಂಡದ ಮೊತ್ತದಲ್ಲಿ ₹2 ಲಕ್ಷವನ್ನು ಮೃತ ಜ್ಯೋತಿಯ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ಅಭಿಯೋಜಕಿ ಮಮತಾ ಬಿ.ಎಸ್. ವಾದ ಮಂಡಿಸಿದ್ದರು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.