ಶಿವಮೊಗ್ಗ: ನಗರದ ಗೋವಿಂದಾಪುರ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ ಸ್ಥಗಿತವಾಗಿರುವ ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿ ತಕ್ಷಣ ಪುನರಾರಂಭ ಮಾಡಿ ಫಲಾನುಭವಿಗಳಿಗೆ ಮನೆ ವಿತರಿಸಬೇಕು ಎಂದು ಆಗ್ರಹಿಸಿ ರಾಷ್ಟ್ರಭಕ್ತರ ಬಳಗದಿಂದ ಅಕ್ಟೋಬರ್ 27ರಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಬಳಗದ ಸಂಚಾಲಕ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯ ವಿಳಂಬ ಹಾಗೂ ಫಲಾನುಭವಿಗಳ ಸಮಸ್ಯೆಯ ಕುರಿತು ಮಾಹಿತಿ ನೀಡಿದರು.

##ಈಶ್ವರಪ್ಪ ಏನಂದ್ರು? ಇಲ್ಲಿದೆ ಪಾಯಿಂಟ್ಸ್

2017ರಲ್ಲಿ ಗೋವಿಂದಾಪುರದಲ್ಲಿ 3,000 ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ 1,300 ಆಶ್ರಯ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಯೋಜನೆ ಆರಂಭವಾಗಿ ಒಂಬತ್ತು ವರ್ಷ ಕಳೆದರೂ ಇದುವರೆಗೆ ಕೇವಲ 463 ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ.
ಕಡು ಬಡವರು ಹಾಗೂ ಕೂಲಿ ಕಾರ್ಮಿಕರಾಗಿರುವ ಫಲಾನುಭವಿಗಳು ಸಾಲ ಮಾಡಿ, ಮನೆಯ ಒಡವೆ ಹಾಗೂ ಮಂಗಳಸೂತ್ರಗಳನ್ನು ಅಡಮಾನವಿಟ್ಟು ತಲಾ ₹80,000 ಪಾವತಿಸಿದ್ದಾರೆ. ಆದರೆ ಮನೆ ಸಿಗದೆ, ಬಡ್ಡಿ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ.
– ಈಶ್ವರಪ್ಪ, ಮಾಜಿ ಸಚಿವ

ಗೋವಿಂದಾಪುರದಲ್ಲಿ ಮನೆಗಳ ನಿರ್ಮಾಣದ ಗುತ್ತಿಗೆ ಪಡೆದಿರುವ ನಾಗಾರ್ಜುನ ಕನ್ಸ್ಟ್ರಕ್ಷನ್ ಸಂಸ್ಥೆಗೆ ಸರ್ಕಾರದಿಂದ ₹15 ಕೋಟಿ ಬಾಕಿ ಇದೆ. ಹಾಗಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಗುತ್ತಿಗೆದಾರರು ಯಂತ್ರೋಪಕರಣ ಹಾಗೂ ಕಾರ್ಮಿಕರನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ. ಗೋಪಿಶೆಟ್ಟಿಕೊಪ್ಪದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ನಡೆಯಬೇಕಿದ್ದ ಕಾಮಗಾರಿಯೂ ಪ್ರಗತಿ ಕಾಣುತ್ತಿಲ್ಲ. ಈ ಕುರಿತು ಅಧಿಕಾರಿಗಳನ್ನು ವಿಚಾರಿಸಿದರೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ.

2024ರ ಜುಲೈ 18ರಂದು ರಾಷ್ಟ್ರಭಕ್ತರ ಬಳಗದಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ಹಾಗೂ ಧರಣಿ ನಡೆಸಲಾಗಿತ್ತು. ಆಗ ಅಧಿಕಾರಿಗಳು ಒಂದೆರಡು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾಗ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಇದುವರೆಗೆ ಕಾಮಗಾರಿ ಪುನರಾರಂಭವಾಗಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೊಂದಿಗೂ ಈಗಾಗಲೇ ಚರ್ಚಿಸಲಾಗಿದೆ. ಸ್ಥಗಿತಗೊಂಡಿರುವ ಕಾಮಗಾರಿಯನ್ನು ಕೂಡಲೇ ಆರಂಭಿಸಿ ಬಡ ಫಲಾನುಭವಿಗಳಿಗೆ ಶೀಘ್ರ ಮನೆಗಳನ್ನು ಹಸ್ತಾಂತರಿಸಬೇಕು.
ಸುದ್ದಿಗೋಷ್ಠಿಯಲ್ಲಿ ಬಳಗದ ಪ್ರಮುಖರಾದ ಈ. ವಿಶ್ವಾಸ್, ಮೋಹನ್ ಜಾಧವ್, ಗೋವಿಂದಪ್ಪ, ನಾಗರಾಜ್, ರಾಜಯ್ಯ ಹಾಗೂ ಶ್ರೀಕಾಂತ್ ಉಪಸ್ಥಿತರಿದ್ದರು.