ವೈದ್ಯರ ವಸತಿಗೃಹದಲ್ಲಿ ಅಕ್ಕ ಕ್ಯಾಂಟೀನ್‌, ಆರೋಗ್ಯ ಕೇಂದ್ರದ ಮುಂದೆ ಸತ್ಯಾಗ್ರಹ

ಆನಂದಪುರ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ವಸತಿಗಾಗಿ ನಿರ್ಮಿಸಲಾಗಿದ್ದ ಕಟ್ಟಡವನ್ನು ತೆರವುಗೊಳಿಸಿ ‘ಅಕ್ಕ ಕ್ಯಾಂಟೀನ್’ ನಡೆಸಲು ಸಿದ್ಧತೆ ಮಾಡಿರುವುದನ್ನು ಖಂಡಿಸಿ ಸಾಮಾಜಿಕ ಹೋರಾಟಗಾರ ಹಾಗೂ ಪತ್ರಕರ್ತ ಬಿ.ಡಿ. ರವಿಕುಮಾರ್ ಅವರು ಆರೋಗ್ಯ ಕೇಂದ್ರದ ಮುಂಭಾಗ ಏಕಾಂಗಿಯಾಗಿ ಸತ್ಯಾಗ್ರಹ ನಡೆಸಿದರು.

ಸಮುದಾಯ ಆರೋಗ್ಯ ಕೇಂದ್ರವು ಸುತ್ತಮುತ್ತಲಿನ ಅನೇಕ ಗ್ರಾಮಗಳ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದೆ. ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸುವುದು ಅತ್ಯಗತ್ಯ. ಆದರೆ ಈಗಾಗಲೇ ವೈದ್ಯರ ವಸತಿಗೃಹದ ಗೋಡೆ, ಮೇಲ್ಛಾವಣಿ, ಕಿಟಕಿ ಹಾಗೂ ಬಾಗಿಲು ವಿವಿಧ ಭಾಗಗಳನ್ನು ಬದಲಾಯಿಸಿ ಹಾಳು ಮಾಡಲಾಗಿದೆ. ಕಟ್ಟಡದ ಬಳಕೆಯನ್ನು ಬದಲಾಯಿಸುವುದರಿಂದ ಭವಿಷ್ಯದಲ್ಲಿ ವೈದ್ಯರಿಗೆ ವಸತಿ ಸಮಸ್ಯೆ ಉಂಟಾಗಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Protest-in-front-of-anandapura-health-care-center

“ವೈದ್ಯರ ವಸತಿಗಾಗಿ ನಿರ್ಮಿಸಲಾದ ಸರ್ಕಾರಿ ಕಟ್ಟಡವನ್ನು ಬೇರೆ ಚಟುವಟಿಕೆಗೆ ಬಳಸುವಾಗ ಸಂಬಂಧಪಟ್ಟ ಇಲಾಖೆಯ ನಿಯಮಾನುಸಾರ ಅನುಮತಿ, ತಾಂತ್ರಿಕ ಪರಿಶೀಲನೆ ಹಾಗೂ ಆಡಳಿತಾತ್ಮಕ ಆದೇಶಗಳನ್ನು ಪಾಲಿಸುವುದು ಅಗತ್ಯವಾಗಿದೆ”

– ರತ್ನಾಕರ ಹೊನಗೋಡು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ

ಸರ್ಕಾರಿ ಆಸ್ತಿಯನ್ನು ನಿಯಮಬಾಹಿರವಾಗಿ ಬೇರೆ ಉದ್ದೇಶಕ್ಕೆ ಬಳಸುತ್ತಿರುವ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಹಾಗೂ ವೈದ್ಯರ ವಸತಿಗೃಹವನ್ನು ಯಥಾಸ್ಥಿತಿಯಲ್ಲಿಯೇ ಉಳಿಸಿಕೊಳ್ಳಬೇಕು ಎಂದು ರವಿಕುಮಾರ್‌ ಒತ್ತಾಯಿಸಿದರು.