ಶಿವಮೊಗ್ಗ ದಸರಾ, ಉದ್ಘಾಟನೆಗೆ ಕ್ಷಣಗಣನೆ, ನಟ ಶ್ರೀನಾಥ್‌ ಆಗಮನ, ಹೇಗಿದೆ ಸಿದ್ಧತೆ?

ಶಿವಮೊಗ್ಗ: ಶಿವಮೊಗ್ಗ ದಸರಾ 2026ಕ್ಕೆ ಭಾನುವಾರ ಬೆಳಿಗ್ಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸಿದ್ಧತೆ ಪೂರ್ಣಗೊಂಡಿದೆ.

ಅ.11ರಂದು ಬೆಳಿಗ್ಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದಿಂದ ನಾಡದೇವಿ ಚಾಮುಂಡೇಶ್ವರಿಯ ಬೆಳ್ಳಿ ಮೂರ್ತಿ, ಬೆಳ್ಳಿ ಮಂಟಪದ ಮೆರವಣಿಗೆ ನಡೆಯಲಿದೆ. ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ತನಕ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಚಲನಚಿತ್ರ ನಟ ಶ್ರೀನಾಥ್‌ ಅವರು ಶಿವಮೊಗ್ಗ ದಸರಾ ಉದ್ಘಾಟಿಸಲಿದ್ದಾರೆ.

Shivamogga-Dasara-Preparations

ದಸರಾ ಉದ್ಘಾಟನೆಗೆ ಸಿದ್ಧತೆ ಪೂರ್ಣ

ದಸರಾ ಉದ್ಘಾಟನಾ ಸಮಾರಂಭದ ಹಿನ್ನೆಲೆ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ದೇಗುಲದ ಮುಂಭಾಗ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಒಳಾಂಗಣದಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ. ಇನ್ನು ನವರಾತ್ರಿ ಸಂದರ್ಭ ಬೆಳ್ಳಿ ಮಂಟಪ ಮತ್ತು ದೇವರ ಮೂರ್ತಿಯನ್ನು ಇರಿಸಲು ವ್ಯವಸ್ಥೆಯಾಗಿದೆ. ನವರಾತ್ರಿ ಸಂದರ್ಭ ಇದೇ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ನಟ ಶ್ರೀನಾಥ್‌ ಆಗಮನ

ಇನ್ನು, ದಸರಾ ಉತ್ಸವ ಉದ್ಘಾಟಕ ನಟ ಶ್ರೀನಾಥ್‌ ಅವರು ಇಂದು ಶಿವಮೊಗ್ಗಕ್ಕೆ ಆಗಮಿಸಿದರು. ಶಾಸಕ ಎಸ್‌.ಎನ್.ಚನ್ನಬಸಪ್ಪ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಪಾಲಿಕೆ ಸಿಬ್ಬಂದಿ ಸೇರಿದಂತೆ ಹಲವರು ನಟ ಶ್ರೀನಾಥ್‌ ಅವರನ್ನು ಸ್ವಾಗತಿಸಿದರು. ನಗರ ಹೊಟೇಲ್‌ ಒಂದರಲ್ಲಿ ನಟ ಶ್ರೀನಾಥ್‌ ಉಳಿದುಕೊಂಡಿದ್ದಾರೆ.