ರೈಲ್ವೆ ಸುದ್ದಿ: ಶಿವಮೊಗ್ಗ, ತಾಳಗುಪ್ಪ ಸೇರಿ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಪ್ರಮುಖ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಅಕ್ಟೋಬರ್ 15 ರವರೆಗೆ ವಿಸ್ತರಿಸಿ ನೈಋತ್ಯ ರೈಲ್ವೆ ಆದೇಶಿಸಿದೆ.
ಕೆಎಸ್ಆರ್ ಬೆಂಗಳೂರು – ತಾಳಗುಪ್ಪ ಎಕ್ಸ್ಪ್ರೆಸ್ ರೈಲಿಗೆ ಅರಸಾಳು ಹಾಗೂ ಕುಂಸಿ ನಿಲ್ದಾಣಗಳಲ್ಲಿ ನೀಡಲಾಗಿದ್ದ ತಾತ್ಕಾಲಿಕ ನಿಲುಗಡೆ ಮುಂದುವರಿಯಲಿದೆ. ಹಾಗೆಯೇ ತಾಳಗುಪ್ಪ – ಮೈಸೂರು ಎಕ್ಸ್ಪ್ರೆಸ್ ರೈಲು ಮಲ್ಲೇಶ್ವರಂ ನಿಲ್ದಾಣದಲ್ಲಿ ಹಾಗೂ ಯಶವಂತಪುರ – ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ ರೈಲು ಚಿಕ್ಕಬಾಣಾವರ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ.

ಇನ್ನು, ಯಶವಂತಪುರ – ಬಿಕಾನೇರ್ ಎಕ್ಸ್ಪ್ರೆಸ್ ರೈಲಿಗೆ ಬೀರೂರಿನಲ್ಲಿ, ಚಿಕ್ಕಮಗಳೂರು – ಯಶವಂತಪುರ ರೈಲಿಗೆ ಸಂಪಿಗೆ ರೋಡ್ನಲ್ಲಿ ಹಾಗೂ ಕೆಎಸ್ಆರ್ ಬೆಂಗಳೂರು – ಸಿಂಧನೂರು ರೈಲಿಗೆ ರಾಮಗಿರಿ ಮತ್ತು ಚಳಗೇರಿಯಲ್ಲಿ ನೀಡಲಾಗಿದ್ದ ತಾತ್ಕಾಲಿಕ ನಿಲುಗಡೆಯನ್ನು ವಿಸ್ತರಿಸಲಾಗಿದೆ. ಯಶವಂತಪುರ – ಕಾರವಾರ ಎಕ್ಸ್ಪ್ರೆಸ್ ರೈಲು ಕುಣಿಗಲ್ ನಿಲ್ದಾಣದಲ್ಲಿ ನಿಲ್ಲಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸಲಾಗಿದ್ದು, ಸಾರ್ವಜನಿಕರು ಈ ಸೌಲಭ್ಯ ಬಳಸಿಕೊಳ್ಳಬೇಕು ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.