ಶಿವಮೊಗ್ಗ ದಸರಾದಲ್ಲು ವಂದೇ ಮಾತರಂ ವಿವಾದ, ವೇದಿಕೆ ಮೇಲೆಯೇ ಕಮಿಷನರ್‌ಗೆ ತರಾಟೆ

ಶಿವಮೊಗ್ಗ: ಶಿವಮೊಗ್ಗ ದಸರಾದಲ್ಲಿಯು ವಂದೇ ಮಾತರಂ ವಿವಾದ ಭುಗಿಲೆದ್ದಿದೆ. ಸರ್ಕಾರದ ಸೂಚನೆ ಧಿಕ್ಕರಿಸಿ ಪೂರ್ಣ ವಂದೇ ಮಾತರಂ ಹಾಡಿದ್ದಕ್ಕೆ ಕಾಂಗ್ರೆಸ್‌ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿ ಕಾರ್ಯಕ್ರಮದಿಂದ ಹೊರ ನಡೆದರು.  

ವಂದೇ ಮಾತರಂ ವಿವಾದ

ಶಿವಮೊಗ್ಗದ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶಿವಮೊಗ್ಗ ದಸರಾದ ಉದ್ಘಾಟನೆ ನೆರವೇರಿತು. ನಟ ಶ್ರೀನಾಥ್‌ ಅವರು ನಾಡ ಹಬ್ಬಕ್ಕೆ ಚಾಲನೆ ನೀಡಿದರು. ಇದಕ್ಕು ಮುನ್ನ ವಂದೇ ಮಾತರಂ ಮತ್ತು ನಾಡಗೀತೆ ಹಾಡಲಾಯಿತು. ವಂದೇ ಮಾತರಂನ ಎರಡು ಚರಣಕ್ಕೆ ಮಾತ್ರ ಮ್ಯೂಸಿಕ್‌ ಸಿದ್ದಪಡಿಸಲಾಗಿತ್ತು. ಅದರ ನಂತರ ನಾಡಗೀತೆಯ ರೆಕಾರ್ಡ್‌ ಇರಿಸಗಿತ್ತು. ಗಾಯಕಿಯರು ವಂದೇ ಮಾತರಂ ಎರಡು ಚರಣ ಹಾಡಿ ಮುಗಿಸಿದ್ದರು. ಮುಂದಿನ ಚರಣ ಹಾಡುತ್ತಿದ್ದಂತೆ ನಾಡಗೀತೆ ಶುರುವಾಗಿತ್ತು. ಆದರೆ ಗಾಯಕಿಯರು ವಂದೇ ಮಾತರಂ ಮುಂದುವರೆಸುತ್ತಿದ್ದಂತೆ ಮ್ಯೂಸಿಕ್‌ ಬಂದ್‌ ಮಾಡಲಾಯಿತು.

Vande-Mataram-Controversy-in-Shivamogga-Dasara

ಗಾಯಕಿಯರು ಪೂರ್ಣ ವಂದೇ ಮಾತರಂ ಹಾಡಿದರು. ನಂತರ ನಾಡಗೀತೆ ಆರಂಭವಾಯಿತು. ಆದರೆ ಮೊದಲ ಎರಡ್ಮೂರು ಸಾಲು ಇಲ್ಲದೆಯೇ ನಾಡಗೀತೆ ಆರಂಭವಾಯಿತು.

ಕಾಂಗ್ರೆಸ್‌ ಮುಖಂಡರ ಆಕ್ರೋಶ

ಸರ್ಕಾರದ ಸೂಚನೆ ಧಿಕ್ಕರಿಸಿ ಪೂರ್ಣ ವಂದೇ ಮಾತರಂ ಹಾಡಿದ್ದಕ್ಕೆ ಕಾಂಗ್ರೆಸ್‌ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆಯಲ್ಲಿದ್ದ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಹೆಚ್‌.ಸಿ.ಯೋಗೇಶ್‌, ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್‌ ಗೌಡ, ಸೂಡಾ ಅಧ್ಯಕ್ಷ ಮಧುಸೂದನ್‌, ಮಾಜಿ ಕಾರ್ಪೊರೇಟರ್‌ಗಳಾದ ನಾಗರಾಜ ಕಂಕಾರಿ, ಪಾಲಾಕ್ಷಿ, ಯಮುನಾ ರಂಗೇಗೌಡ, ರೇಖಾ ರಂಗನಾಥ್‌ ಸೇರಿ ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್‌.ಸಿ.ಯೋಗೇಶ್‌ ಅವರು ವೇದಿಕೆಯ ಮೇಲೆಯೆ ಮಹಾನಗರ ಪಾಲಿಕೆ ಕಮಿಷನರ್‌ ಮಾಯಣ್ಣ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು. ನಂತರ ತಾವು ವೇದಿಕೆಯಿಂದ ಹೊರಗೆ ನಡೆಯುತ್ತೇವೆ ಎಂದು ಘೋಷಿಸಿ ತೆರಳಿದರು.  

ಕಮಿಷನರ್‌ ವರ್ಗಾವಣೆ ಆಗಬೇಕು

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಹೆಚ್‌.ಸಿ.ಯೋಗೇಶ್‌ ಅವರು, ‘ಸರ್ಕಾರದ ಸುತ್ತೋಲೆಯನ್ನು ಧಿಕ್ಕರಿಸಿ ಪೂರ್ಣ ವಂದೇ ಮಾತರಂ ಹಾಡಿಸಲಾಗಿದೆ. ಈ ಬಾರಿ ದಸರಾದ ಉಸ್ತುವಾರಿ ಆಗಿರುವುದು ಮಹಾನಗರ ಪಾಲಿಕೆ ಕಮಿಷನರ್‌ ಮಾಯಣ್ಣಗೌಡ. ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು. ಇನ್ನು, ಸಿಎಂ ಕಾರ್ಯಕ್ರಮದಲ್ಲಿ ಇದೇ ವಂದೇ ಮಾತರಂ ವಿಚಾರಕ್ಕೆ ಶಾಸಕ ಚನ್ನಬಸಪ್ಪ ಅವರು ಕಾರ್ಯಕ್ರಮದಿಂದ ಹೊರ ನಡೆದಿದ್ದರು. ನಾವು ದಸರಾದ ವಿರೋಧಿಗಳಲ್ಲ. ಆದರೆ ಸರ್ಕಾರದ ಸುತ್ತೋಲೆಗೆ ಬೆಲೆ ಕೊಡದ ಸಭೆಯಲ್ಲಿ ತಾವು ಇರುವುದಿಲ್ಲ’ ಎಂದು ಘೋಷಿಸಿದರು. ಮಹಾನಗರ ಪಾಲಿಕೆ ಮತ್ತು ಶಾಸಕ ಚನ್ನಬಸಪ್ಪ ವಿರುದ್ಧ ಘೋಷಣೆ ಕೂಗುತ್ತಾ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಕಾರ್ಯಕ್ರಮದಿಂದ ಹೊರ ನಡೆದರು.