ಉದ್ಘಾಟನೆ ದಿನವೇ BSC ಟೆಕ್ಸ್‌ಟೈಲ್ಸ್‌ ವ್ಯವಸ್ಥಾಪಕ ಸೇರಿ 20ಕ್ಕೂ ಹೆಚ್ಚು ಮಂದಿ ವಿರುದ್ಧ ಕೇಸ್‌, ಕಾರಣವೇನು?

ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರ ಕಾರು ಅಡ್ಡಗಟ್ಟಿ, ಕಪ್ಪು ಬಟ್ಟೆ ತೋರಿಸಿದ ಪ್ರಕರಣ ಸಂಬಂಧ ಯುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಇದೇ ವೇಳೆ ಬಿ.ಎಸ್‌.ಸಿ ಟೆಕ್ಸ್‌ಟೈಲ್ಸ್‌ ವ್ಯವಸ್ಥಾಪಕರ ವಿರುದ್ಧವು ಪೊಲೀಸರು ಕೇಸ್‌ ದಾಖಲು ಮಾಡಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

ಬಿ.ಹೆಚ್‌.ರಸ್ತೆಯ ಪಾರೇಖ್ ವಿನಾಯಕ ಮಾಲ್‌ನಲ್ಲಿ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಬಟ್ಟೆ ಅಂಗಡಿಯ ಉದ್ಘಾಟನೆಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಆಗಮಿಸಿದ್ದರು. ಸಚಿವ ಸೋಮಣ್ಣ ಅವರ ಕಾರು ಬಿ.ಹೆಚ್. ರಸ್ತೆ ತೆರಳುತ್ತಿದ್ದಾಗ ಯುವ ಕಾಂಗ್ರೆಸ್‌ ಕಾರ್ಯಕರ್ತರು ಮುತ್ತಿಗೆ ಹಾಕಿ, ಕಪ್ಪು ಬಾವುಟ ಪ್ರದರ್ಶಿಸಿದ್ದರು. ಸಚಿವರ ಕಾರು ಅಡ್ಡಗಟ್ಟಿ ಶಾಂತಿ ಭಂಗ ಮಾಡಿದ್ದಾರೆ ಎಂದು ಅರೋಪಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.  

Doddapete-Police-Station-Shimoga

ಯುವ ಕಾಂಗ್ರೆಸ್ ನಾಯಕರಾದ ಚರಣ್ ಬೊಮ್ಮನಕಟ್ಟೆ, ಗಿರೀಶ್, ಬಾಲಾಜಿ, ಅಶ್ವಥ್, ಆನಂದ್ ಬಂಗೇರ, ಹರ್ಷಿತಾ ಗೌಡ, ಶಿವು ಮಲವಗೊಪ್ಪ, ರವಿ ಕಾಟೀಕೆರೆ, ಚಂದ್ರೋಜಿ, ಆಕಾಶ್, ಆದಿತ್ಯ ಸೀಗೆಹಟ್ಟಿ, ವಿಜಯ್ ನವಿಲೆ, ಪ್ರವೀಣ್ ಹರಮಘಟ್ಟ, ತೌಫೀಕ್ ಚಿಕ್ಕಲ್, ನಿಖಿಲ್, ವಿಷ್ಣು, ರವಿ, ಶಿವರಾಜ್ ಸೇರಿದಂತೆ 20ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.  

ಬಿಎಸ್‌ಸಿ ಮ್ಯಾನೇಜರ್‌ ವಿರುದ್ಧವು ಕೇಸ್‌

ಪಾರೇಖ ವಿನಾಯಕ ಮಾಲ್‌ನಲ್ಲಿ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಬಟ್ಟೆ ಅಂಗಡಿ ಉದ್ಘಾಟನೆಗೆ ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಚನ್ನಬಸಪ್ಪ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗಿತ್ತು. ಆದರೆ, ಅಂಗಡಿಯ ವ್ಯವಸ್ಥಾಪಕರು ಗಣ್ಯರ ಭದ್ರತೆ ಹಾಗೂ ಬಂದೋಬಸ್ತ್ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಸಚಿವರ ಭದ್ರತೆಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಬಿಎಸ್‌ಸಿ ಟೆಕ್ಸ್‌ಟೈಲ್ಸ್‌ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.