ಶಿವಮೊಗ್ಗ: ವಿದ್ಯಾರ್ಥಿನಿಯರ ಮೇಲೆ ಸಂಸದ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲದಯ ಪ್ರಾಧ್ಯಾಪಕ ಡಾ. ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಲಾಯಿತು.
ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಗೋಪಿ ವೃತ್ತದಿಂದ ಮೆರವಣಿಗೆ ನಡೆಸಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಕಾಂಗ್ರೆಸ್ ಕಚೇರಿ ಮುಂದೆ ಹೈ ಅಲರ್ಟ್
ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಮುತ್ತಿಗೆ ಹಾಕಲಿರುವ ಹಿನ್ನೆಲೆ ಕಾಂಗ್ರೆಸ್ ಕಚೇರಿ ಮುಂಭಾಗ ಪೊಲೀಸರು ಬಂದೋಬಸ್ತ್ ಹೆಚ್ಚಳ ಮಾಡಿದ್ದರು. ಕಾಂಗ್ರೆಸ್ ಕಚೇರಿ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ರಸ್ತೆಯ ಎರಡು ಬದಿ ಎರಡು ಹಂತದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಜನ ಸಂಚಾರವನ್ನು ತಡೆಗಟ್ಟಲಾಗಿತ್ತು.
ಕಾಂಗ್ರೆಸ್ ಕಾರ್ಯಕರ್ತರಿಗೆ ಎಚ್ಚರಿಕೆ
ಇನ್ನು, ಕಾಂಗ್ರೆಸ್ ಕಚೇರಿ ಒಳಗಿದ್ದ ಕಾರ್ಯಕರ್ತರನ್ನು ಹೊರಗೆ ಕಳುಹಿಸಲು ಪೊಲೀಸರು ಪ್ರಯತ್ನಿಸಿದರು. ಕಚೇರಿ ಒಳಗಿದ್ದ ಸೂಡಾ ಅಧ್ಯಕ್ಷ ಮಧುಸೂದನ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರ್ಷಿತ್ ಗೌಡ, ಎನ್‌ಎಸ್‌ಯುಐ ಅಧ್ಯಕ್ಷ ವಿಜಯ್ ಸೇರಿ ಹಲವು ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯಲ್ಲಿ ಇದ್ದರು. ಅವರು ಅಲ್ಲಿಂದ ತೆರಳುವಂತೆ ಪೊಲೀಸರು ಸೂಚಿಸಿದರು. ಆದರೆ ಕಾಂಗ್ರೆಸ್ ಕಾರ್ಯಕರ್ತರು ಹೊರಗೆ ಹೋಗಲು ನಿರಾಕರಿಸಿದರು. ತಾವು ಕಚೇರಿಯಲ್ಲೇ ಉಳಿಯುವುದಾಗಿ ಪಟ್ಟು ಹಿಡಿದರು.
ಮಾರ್ಗ ಮಧ್ಯೆ ಪೊಲೀಸ್ ವಶಕ್ಕೆ
ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಗೋಪಿ ಸರ್ಕಲ್‌ನಿಂದ ಮೆರವಣಿಗೆ ನಡೆಸಿದರು. ಮಥುರಾ ಪ್ಯಾರಾಡೈಸ್ ಬಳಿ ಮೆರವಣಿಗೆ ಆಗಮಿಸುತ್ತಿದ್ದಂತೆ ಪೊಲೀಸರು ಅವರನ್ನು ತಡೆದರು. ಮಹಿಳೆಯರನ್ನು ವಶಕ್ಕೆ ಪಡೆದರು. ಈ ವೇಳೆ ಕೆಲವು ಮಹಿಳೆಯರು ಪೊಲೀಸರಿಂದ ತಪ್ಪಿಸಿಕೊಂಡು ಕಾಂಗ್ರೆಸ್ ಕಚೇರಿ ರಸ್ತೆಯ ತನಕ ಬಂದು ಘೋಷಣೆ ಕೂಗಿದರು. ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಮುಂದಾದಾಗ ನಡುರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದರು.
ನೂಕಾಟ, ತಳ್ಳಾಟ, ವಾಗ್ವಾದ
ಮಥುರಾ ಪ್ಯಾರಾಡೈಸ್ ಬಳಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆಯುವ ಸಂದರ್ಭ ನೂಕಾಟ, ತಳ್ಳಾಟ ಉಂಟಾಯಿತು. ಈ ವೇಳೆ ಬಿಜೆಪಿ ಕಾರ್ಯಕರ್ತೆಯರು ಪೊಲೀಸರ ಜೊತೆಗೆ ವಾಗ್ವಾದವನ್ನೂ ನಡೆಸಿದರು. ಈ ಸಂದರ್ಭ ಕೆಲವು ಕಾರ್ಯಕರ್ತೆಯರಿಗೆ ಗಾಯವಾಗಿದ್ದು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಕೆ.ಜಗದೀಶ್, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಮಧುರಾ ಶಿವಾನಂದ್, ಪ್ರಧಾನ ಕಾರ್ಯದರ್ಶಿ ಸುಮಲತಾ ಭೂಪಾಳಂ, ವೀಣಾ ನಾಗರಾಜ್, ಸುರೇಖಾ ಮುರಳೀಧರ್, ರಶ್ಮೀ ಶ್ರೀನಿವಾಸ್, ಮಂಗಾಳಾ ನಾಗೇಂದ್ರ, ಶಾಂತಾ ಸುರೇಂದ್ರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.