ಗಾಜನೂರು, ಸಕ್ರೆಬೈಲು, ಮಂಡಗದ್ದೆಯ ಹೊಟೇಲ್‌ಗಳ ಮೇಲೆ ದಾಳಿ, ಪ್ರಕರಣ ದಾಖಲು

ಶಿವಮೊಗ್ಗ: ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದ ಡಾಬಾ ಹಾಗೂ ಮಾಂಸಾಹಾರಿ ಹೋಟೆಲ್‌ಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ, 7 ಪ್ರಕರಣಗಳನ್ನು ದಾಖಲಿಸಿದ್ದಾರೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಅಬಕಾರಿ ಉಪ ಆಯುಕ್ತ ಡಾ. ಕೆ.ಎಸ್. ಮುರಳಿ ಅವರ ಮಾರ್ಗದರ್ಶನದಲ್ಲಿ, ಅಬಕಾರಿ ಉಪ ಅಧೀಕ್ಷಕರಾದ ನೌಷಾದ್ ಅಹಮ್ಮದ್ ಖಾನ್ ಹೆಚ್ ಹಾಗೂ ಶೀಲಾ ಧಾರಜ್ಕರ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

Excise-Department-Raid-on-Sakrebyle-and-Gajanur-Hotels

ಗಾಜನೂರು, ಸಕ್ರೆಬೈಲು, ಮಂಡಗದ್ದೆ

ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯ ಗಾಜನೂರು, ಸಕ್ರೆಬೈಲು ಮತ್ತು ಮಂಡಗದ್ದೆ ಗ್ರಾಮಗಳ ವ್ಯಾಪ್ತಿಯ ಡಾಬಾ ಹಾಗೂ ಮಾಂಸಾಹಾರಿ ಹೋಟೆಲ್‌ಗಳ ಮೇಲೆ ಏಕಾಏಕಿ ದಾಳಿ ನಡೆಸಲಾಗಿದೆ. ಈ ವೇಳೆ ಗ್ರಾಹಕರಿಗೆ ಅಕ್ರಮವಾಗಿ ಮದ್ಯಪಾನ ಮಾಡಲು ಅವಕಾಶ ನೀಡಿದ್ದ ಹೋಟೆಲ್ ಹಾಗೂ ಡಾಬಾ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇನ್ಮುಂದೆ ಡಾಬಾ ಅಥವಾ ಮಾಂಸಾಹಾರಿ ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಮದ್ಯ ಸೇವಿಸಲು ಅವಕಾಶ ನೀಡಬಾರದು. ನಿಯಮ ಉಲ್ಲಂಘಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಅಬಕಾರಿ ಉಪ ಆಯುಕ್ತ ಡಾ. ಕೆ.ಎಸ್. ಮುರಳಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.