ಶಿವಮೊಗ್ಗದಲ್ಲಿ ಐದು ದಿನದ ನಡಿಗೆ, ಐದು ಪಟಾಕಿಯೇ ತಾಲೀಮು, ಇಲ್ಲೇಕೆ ಮೈಸೂರು ಮಾದರಿ ಆಗುವುದಿಲ್ಲ?

ಶಿವಮೊಗ್ಗ: ಐದು ದಿನದ ನಡಿಗೆ, ಐದು ಪಟಾಕಿ. ಇದಿಷ್ಟೆ ಜಂಬೂ ಸವಾರಿಯ ತಾಲೀಮು. ಶಿವಮೊಗ್ಗ ದಸರಾ ಅಂಬಾರಿ ಮೆರವಣಿಗೆ ಸಂದರ್ಭ ಸೋಮಣ್ಣ ಆನೆ ಬೆದರಿ ಓಡಲು ಇದುವೆ ಪ್ರಮುಖ ಕಾರಣ. (ಶಿವಮೊಗ್ಗ ಲೈವ್‌.ಕಾಂ | ಮುಂದಿನ 6 ಪ್ಯಾರಾಗಳು ಕೆಳಗಿವೆ)

ಶಿವಮೊಗ್ಗ ದಸರಾವನ್ನು ಮೈಸೂರು ಮಾದರಿಯಲ್ಲಿ ಅದ್ಧೂರಿಯಾಗಿ ನಡೆಸುವುದು ಜನಪ್ರತಿನಿಧಿಗಳು, ಮಹಾನಗರ ಪಾಲಿಕೆಯ ಗುರಿ. ಮೈಸೂರು ನಂತರ ಅಂಬಾರಿ ಮೆರವಣಿಗೆ ಶಿವಮೊಗ್ಗದಲ್ಲಿಯೇ ವಿಜೃಂಭಣೆಯಿಂದ ನಡೆಯಲಿದೆ ಎಂದು ಅಧಿಕಾರಿಗಳು ಬೀಗುತ್ತಾರೆ. ಆದರೆ ಆನೆಗಳ ತಾಲೀಮಿನ ವಿಚಾರಕ್ಕೆ ಬಂದಾಗ ಮೈಸೂರು ಮಾದರಿಯನ್ನು ಪಾಲಿಸುವುದಿಲ್ಲ.

Three-Elephants-from-sakrebyle-lands-in-Shivamogga-for-Dasara-Jamboo-Savari

ಐದು ಪಟಾಕಿಯ ತಾಲೀಮು

ಈ ಬಾರಿ ದಸರಾ ಉತ್ಸವದ ಜಂಬೂ ಸವಾರಿಗೆ ಸಕ್ರೆಬೈಲು ಆನೆ ಬಿಡಾರದ ಮೂರು ಆನೆಗಳು ಅಕ್ಟೋಬರ್‌ 15ರಂದು ಶಿವಮೊಗ್ಗ ನಗರಕ್ಕೆ ಆಗಮಿಸಿದವು. ಅ.16ರಿಂದ ತಾಲೀಮು ಆರಂಭವಾಯಿತು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಆನೆಗಳನ್ನು ಕರೆದೊಯ್ದು ಮೆರವಣಿಗೆ ನಡೆಸಲಾಗುತ್ತಿತ್ತು. ಆನೆಗಳು ಫ್ರೀಡಂ ಪಾರ್ಕ್‌ನಲ್ಲಿ ತಲುಪಿದಾಗ ಐದಾರು ಪಟಾಕಿ ಸಿಡಿಸಿ ಅವುಗಳಲ್ಲಿ ಭಯ ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದರು. ಐದು ದಿನದ ನಡಿಗೆ, ಐದು ಪಟಾಕಿಯೇ ತಾಲೀಮು ಎಂಬಾತಾಗಿತ್ತು.

ವಾದ್ಯಗಳು, ಜನ ಜಂಗುಳಿ

ನಗರದ ವಾತಾವರಣಕ್ಕೆ ಆನೆಗಳು ಹೊಂದಿಕೊಳ್ಳಲಿ ಎಂಬುದಕ್ಕೆ ತಾಲೀಮು ನಡೆಸಲಾಗುತ್ತದೆ. ಮೈಸೂರು ದಸರಾ ಆನೆಗಳಿಗೆ ಆಗಸ್ಟ್‌ 30ರಿಂದಲೇ ತಾಲೀಮು ಆರಂಭಿಸಲಾಗಿತ್ತು. ನಿತ್ಯ ಎರಡು ಬಾರಿ ಆನೆಗಳನ್ನು ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕರೆದೊಯ್ದು ತಾಲೀಮು ನಡೆಸುತ್ತಿದ್ದರು. ಸಿಡಿಮದ್ದು ಸಿಡಿಸಿ ಆನೆಗಳನ್ನು ನಗರದ ವಾತಾವರಣ, ಜನ ಜಂಗುಳಿಗೆ ಹೊಂದಿಕೆ ಆಗುವಂತೆ ಮಾಡುತ್ತಿದ್ದರು. ಆದರೆ ಶಿವಮೊಗ್ಗದಲ್ಲಿ ತಾಲೀಮು ಐದು ದಿನದ ನಡಿಗೆ, ಐದು ಪಟಾಕಿಗೆ ಸೀಮಿತವಾಯಿತು.

ಮೊದಲ ಬಾರಿ ದಸರಾಗೆ ಆಗಮಿಸಿದ್ದ ಸೋಮಣ್ಣ ಆನೆಗೆ ನಗರ ಪ್ರದೇಶದ ವಾತಾವರಣಕ್ಕೆ ಹೊಂದಿಕೊಳ್ಳಲು ಇನ್ನಷ್ಟು ಸಮಯ ಬೇಕಿತ್ತು. ಆದರೆ ಅದಕ್ಕು ಮೊದಲೇ ಅಂಬಾರಿ ಹೊರಿಸಿ, ವಾದ್ಯಗಳ ಶಬ್ದ, ಜನ ಜಂಗುಳಿ ಮಧ್ಯೆ ಆನೆಗಳನ್ನು ಕರೆತಂದು ನಿಲ್ಲಿಸಲಾಗಿತ್ತು. ಎಲ್ಲದಕ್ಕು ಮೈಸೂರು ಮಾದರಿ ಎಂದು ಭಾಷಣ ಮಾಡುವ ಜನಪ್ರತಿನಿಧಿಗಳು, ಅಧಿಕಾರಿಗಳು ತಾಲೀಮಿನ ವಿಚಾರಕ್ಕೆ ಬಂದಾಗ ಸೊಲ್ಲೆತ್ತದಿರುವುದರಿಂದ ದುರ್ಘಟನೆ ಸಂಭವಿಸಿದೆ.