ಗಾಬರಿ, ಆತಂಕದಲ್ಲೂ ತಾಳ್ಮೆ ಪ್ರದರ್ಶಿಸಿದ ಸೋಮಣ್ಣ ಆನೆ, ಜನರ ಮೆಚ್ಚುಗೆ, ಇಲ್ಲಿದೆ ಡಿಟೇಲ್ಸ್

ಶಿವಮೊಗ್ಗ: ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ವಿಚಲಿತಗೊಂಡು ಓಡಿದ ಘಟನೆ ದೇಶವ್ಯಾಪಿ ಸುದ್ದಿಯಾಗುತ್ತಿದೆ. ಆದರೆ ಸೋಮಣ್ಣ ಆನೆ ಭಯಗೊಂಡು ಮೆರವಣಿಯಿಂದ ಓಡುವಾಗಲು ತನ್ನ ಶಾಂತ ಸ್ವಭಾವನ್ನು ಬಿಟ್ಟಿಲ್ಲ. ಇದು ಜನರ ಮೆಚ್ಚುಗೆ ಗಳಿಸಿದೆ. (ಶಿವಮೊಗ್ಗ ಲೈವ್‌.ಕಾಂ | ಮುಂದಿನ 7 ಪ್ಯಾರಾಗಳು ಕೆಳಗಿವೆ)

ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಮೆರವಣಿಯಲ್ಲಿ ಏಕಾಏಕಿ ನಿಂತಿತು. ದಿಢೀರನೇ ಹಿಂದಕ್ಕೆ ತಿರುಗಿ ಕೂಗಿತು. ಆಗ ಅಕ್ಕಪಕ್ಕದಲ್ಲಿದ್ದ ಸಕ್ರೆಬೈಲು ಬಿಡಾರದ ಸಿಬ್ಬಂದಿ, ಪೊಲೀಸರು, ಹೋಂ ಗಾರ್ಡ್‌ ಸಿಬ್ಬಂದಿ, ಸ್ವಯಂ ಸೇವಕರು ಗಾಬರಿಯಾಗಿ ದೂರಕ್ಕೆ ಸರಿದರು. ಅಷ್ಟರಲ್ಲಿ ಆನೆ ಮೆರವಣಿಗೆ ಸಾಗುತ್ತಿದ್ದ ಮಾರ್ಗದ ವಿರುದ್ಧ ದಿಕ್ಕಿಗೆ ತೆರಳಿತು. ಜನ ಜಂಗುಳಿ ಇದ್ದಲ್ಲಿ ಸೋಮಣ್ಣ ನಿಧಾನವಾಗಿ ಹೆಜ್ಜೆ ಹಾಕಿ ನಡೆಯಿತು. ಜನ ದಟ್ಟಣೆಯನ್ನು ದಾಟಿದ ನಂತರ ಖಾಲಿ ರಸ್ತೆ ಕಂಡಾಗ ಓಡಲು ಆರಂಭಿಸಿತು.

Sakrebyle-Elephant-Somanna-Runs-with-Howdah-in-Shivamogga

ದೊಡ್ಡ ಅನಾಹುತ ತಪ್ಪಿಸಿದ ಸೋಮಣ್ಣ

ವಾದ್ಯಗಳ ಶಬ್ದ, ಜನ ದಟ್ಟಣೆ, ಏಕಾಏಕಿ ಮೈಮೇಲೆ ಹೊರಿಸಿದ ಭಾರದಿಂದ ವಿಚಲಿತನಾದ ಸೋಮಣ್ಣ ಅಪ್ಪಿತಪ್ಪಿ ಮೆರವಣಿಗೆ ಸಾಗುತ್ತಿದ್ದ ದಿಕ್ಕಿನಲ್ಲಿಯೇ ಓಡಿದ್ದರೆ ದೊಡ್ಡ ಅನಾಹುತ ನಿಶ್ಚಿತವಾಗಿತ್ತು. ಆದರೆ ಸೋಮಣ್ಣ ಆನೆ ಅಂಬಾರಿ ಮೆರವಣಿಗೆ ಆರಂಭವಾದ ದಿಕ್ಕಿಗೆ ಓಡಿತು. ಇದರಿಂದ ದೊಡ್ಡ ಅನಾಹುತ ತಪ್ಪಿದೆ. ಇನ್ನು, ರಸ್ತೆಯಲ್ಲಿ ಓಡುವಾಗಲು ಇಕ್ಕೆಲದಲ್ಲಿ ನಿಂತಿದ್ದ ಜನರತ್ತ ನುಗ್ಗಲಿಲ್ಲ. ಅಕ್ಕಪಕ್ಕದಲ್ಲಿ ಓಡುತ್ತಿದ್ದ ಸಕ್ರೆಬೈಲು ಸಿಬ್ಬಂದಿಯತ್ತಲು ಸಿಟ್ಟು ತೋರಿಸಲಿಲ್ಲ. ಅಂತಹ ಸಂದರ್ಭದಲ್ಲಿಯು ಸೋಮಣ್ಣ ತಾಳ್ಮೆ ವಹಿಸಿದ್ದ.

ಬಂದ ದಾರಿ, ಉಳಿದ ಜಾಗಗಳಲ್ಲೆ ನಿಂತ

ಮೆರವಣಿಗೆಯಿಂದ ಓಡಿದ ಸೋಮಣ್ಣ ಆನೆ ಶಿವಪ್ಪನಾಯಕ ಅರಮನೆ ಮುಂಭಾಗ ಅಂಬಾರಿ ಹೊರಿಸಿದ ಜಾಗಕ್ಕೆ ಬಂದು ವೇಗ ತಗ್ಗಿಸಿತು. ಆದರೆ ಅಲ್ಲಿಯು ನಿಲ್ಲುವುದು ತನಗೆ ಸುರಕ್ಷಿತವಲ್ಲ ಎಂದು ಭಾವಿಸಿ ಪುನಃ ಮುಂದಕ್ಕೆ ಸಾಗಿ, ಎಡಗಡೆಯ ಖಾಲಿ ಜಾಗಕ್ಕೆ ನುಗ್ಗಿತು. ಸಕ್ರೆಬೈಲಿನಿಂದ ಶಿವಮೊಗ್ಗಕ್ಕೆ ಕರೆತಂದಾಗ ಅದೇ ಜಾಗದಲ್ಲಿ ರಾಂಪ್‌ ಮೂಲಕ ಆನೆಗಳನ್ನು ಕೆಳಗೆ ಇಳಿಸಲಾಗಿತ್ತು. ಆದರೆ ಸಿಟ್ಟಿನ ಕಾರಣಕ್ಕೋ, ಆತಂಕದ ಕಾರಣಕ್ಕೋ ಅಲ್ಲಿಯು ನಿಲ್ಲದೆ ಗಲ್ಲಿಯೊಳಗೆ ನುಗ್ಗಿ ಪಕ್ಕದ ರಸ್ತೆಗೆ ಸಾಗಿತು.

ವಾಲಿದ ಅಂಬಾರಿ, ಓಟ ನಿಲ್ಲಿಸಿದ ಆನೆ

ಕೋಟೆ ರಸ್ತೆಗೆ ಬಂದು ಮನೆಯೊಂದರ ಆವರಣಕ್ಕೆ ನುಗ್ಗಿದ ಸೋಮಣ್ಣ ಆನೆ, ಅಲ್ಲಿಂದ ಹೊರಗೆ ಬರುವಷ್ಟರಲ್ಲಿ ಅಂಬಾರಿಗೆ ಕಟ್ಟಿದ್ದ ಹಗ್ಗಗಳು ಸಡಿಲಗೊಂಡವು. ಆನೆಯ ಬಲ ಭಾಗಕ್ಕೆ ಅಂಬಾರಿ ವಾಲಿತು. ಆಗ ಕಾರೊಂದಕ್ಕೆ ಅಂಬಾರಿ ತಗುಲಿದ್ದರಿಂದ ಆನೆ ಮುಂದೆ ಸಾಗದಾಯಿತು. ಸಿಟ್ಟಾದ ಸೋಮಣ್ಣ ಆನೆ ಕಾರನ್ನು ಎತ್ತಿ ಪಕ್ಕಕ್ಕೆ ತಳ್ಳಲು ಯತ್ನಿಸಿತು. ಅಷ್ಟರಲ್ಲಿ ಅಂಬಾರಿ ನೆಲಕ್ಕುರುಳಿತು. ಅದರೆ ಹೊಟ್ಟೆಯ ಸುತ್ತಲು ಕಟ್ಟಿದ್ದ ಬೆಲ್ಟ್‌ ಬಿಚ್ಚಿಕೊಳ್ಳದ ಹಿನ್ನೆಲೆ ಸೋಮಣ್ಣ ಆನೆ ಮುಂದೆ ಸಾಗಲು ಕಷ್ಟವಾಯಿತು. ಇನ್ನೊಂದೆಡೆ ಬಹದ್ದೂರ್‌ ಆನೆಯನ್ನು ಅಡ್ಡ ನಿಲ್ಲಸಿ ಸೋಮಣ್ಣ ಆನೆಯನ್ನು ನಿಯಂತ್ರಿಸಲಾಯಿತು. ಇದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು.

ಅಪರಾಧಿಯಂತೆ ಕರೆದೊಯ್ಯಲಾಯಿತು

ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆನೆಗೆ ಅರಿವಳಿಕೆ ನೀಡಿ ಸುಮಾರು ಅರ್ಧ ಗಂಟೆ ನಿಲ್ಲಿಸಲಾಗಿತ್ತು. ಆನೆ ಸಹಜ ಸ್ಥಿತಿಗೆ ಮರಳಿದಾಗ ಹಗ್ಗ, ಬೆಲ್ಟ್‌ಗಳನ್ನು ತೆಗೆದು ಹೊರಗೆ ಕರೆತರಲಾಯಿತು. ಆನೆಯ ಮುಂಬದಿಯ ಕಾಲುಗಳಿಗೆ ಚೈನ್‌ ಬಿಗಿದು, ಜಿಲ್ಲಾ ತರಬೇತಿ ಸಂಸ್ಥೆಯ ತನಕ ಕರೆದೊಯ್ಯಲಾಯಿತು. ಈ ಸಂದರ್ಭ ಸೋಮಣ್ಣ ಆನೆ ಎಂದಿನಂತೆ ಸಹಜವಾಗಿ ಮುಂದಕ್ಕೆ ಸಾಗಿತು. ಜನರತ್ತ ಮುಖ ಹೊರಳಿಸಿ, ಅತ್ತಿತ್ತ ಸೊಂಡಿಲು ಆಡಿಸುತ್ತಾ ನಡೆಯಿತು.