ಶಿವಮೊಗ್ಗ: ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಜ್ಯ ಶಾಖೆಯ 92ನೇ ವಾರ್ಷಿಕ ಸಮ್ಮೇಳನ ಮೆಡಿಕಾನ್–2026 ಶೀರ್ಷಿಕೆಯಡಿ ಅ. 23ರಿಂದ 25ರವರೆಗೆ ನಗರದ ಸುಬ್ಬಯ್ಯ ವೈದ್ಯಕೀಯ ಸಂಸ್ಥೆಯಲ್ಲಿ ನಡೆಯಲಿದೆ ಎಂದು ಐಎಂಎ ಜಿಲ್ಲಾ ಘಟಕದ ಹಿರಿಯ ಸದಸ್ಯ ಡಾ. ಪಿ. ನಾರಾಯಣ ತಿಳಿಸಿದರು. (ಶಿವಮೊಗ್ಗ ಲೈವ್.ಕಾಂ | ಮುಂದಿನ 11 ಪ್ಯಾರಾಗಳು ಕೆಳಗಿವೆ)
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 2,500 ವೈದ್ಯರು ಭಾಗವಹಿಸುವ ನಿರೀಕ್ಷೆಯಿದೆ. ವೈದ್ಯಕೀಯ ಜ್ಞಾನವೃದ್ಧಿ, ನೈತಿಕ ವೈದ್ಯಕೀಯ ಪದ್ಧತಿ, ವೃತ್ತಿಪರ ಸಹಯೋಗ ಹಾಗೂ ಗುಣಮಟ್ಟದ ರೋಗಿಗಳ ಆರೈಕೆಗೆ ಸಮ್ಮೇಳನ ಒತ್ತು ನೀಡಲಿದೆ ಎಂದರು.

ಸಮಾವೇಶದ ಉದ್ಘಾಟನೆಗೆ ಆರೋಗ್ಯ ಸಚಿವ
ಅ. 24ರಂದು ಸಂಜೆ 4.30ಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವಕ್ಫ್ ಸಚಿವ ಯು.ಟಿ. ಖಾದರ್ ಸಮಾವೇಶ ಉದ್ಘಾಟಿಸಲಿದ್ದಾರೆ. ಸುಬ್ಬಯ್ಯ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್. ನಾಗೇಂದ್ರ ಹಾಗೂ ಸರ್ಜಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ ಸರ್ಜಿ ಭಾಗವಹಿಸಲಿದ್ದಾರೆ. ಐಎಂಎ ರಾಜ್ಯ ಶಾಖೆಯ ನೂತನ ಅಧ್ಯಕ್ಷರಾಗಿ ಭದ್ರಾವತಿಯ ಮನೋವೈದ್ಯ ಡಾ. ಹರೀಶ್ ದೇಲಂತಬೆಟ್ಟು ಅಧಿಕಾರ ಸ್ವೀಕರಿಸಲಿದ್ದಾರೆ. ಹಾಲಿ ಅಧ್ಯಕ್ಷ ಡಾ. ಟಿ.ಎ. ವೀರಭದ್ರಯ್ಯ ಅವರು ಅಧಿಕಾರ ಹಸ್ತಾಂತರಿಸಲಿದ್ದಾರೆ ಎಂದು ತಿಳಿಸಿದರು.
ಅ.23ರಂದು ಬೆಳಿಗ್ಗೆ 9ರಿಂದ ವೈದ್ಯರ ಕೌಶಲವರ್ಧನೆ ಹಾಗೂ ಪ್ರಾಯೋಗಿಕ ಜ್ಞಾನ ಹೆಚ್ಚಿಸುವ ಕಾರ್ಯಾಗಾರಗಳು ನಡೆಯಲಿವೆ. ಕಾರ್ಯಾಗಾರಗಳ ಉದ್ಘಾಟನೆಯಲ್ಲಿ ಡಾ. ಸಿ.ಎಂ. ಸಿದ್ದಲಿಂಗಪ್ಪ, ಡಾ. ಜಿ. ವಿನಾಯಕ, ಡಾ. ಎಂ.ಎಸ್. ಕೌಶಿಕ್, ಡಾ. ಕೆ. ರಮೇಶ್ ಬಾಬು ಹಾಗೂ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಸ್. ನಟರಾಜ್ ಭಾಗವಹಿಸಲಿದ್ದಾರೆ.
ಸಮ್ಮೇಳನದ ಅಂಗವಾಗಿ ವಿವಿಧ ವೈದ್ಯಕೀಯ ವಿಭಾಗಗಳ ತಜ್ಞರಿಂದ ವೈಜ್ಞಾನಿಕ ಅಧಿವೇಶನಗಳು ಹಾಗೂ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಧುನಿಕ ವೈದ್ಯಕೀಯ ಬೆಳವಣಿಗೆಗಳು, ಸಾಕ್ಷ್ಯಾಧಾರಿತ ಚಿಕಿತ್ಸಾ ಪದ್ಧತಿಗಳು ಮತ್ತು ಪ್ರಸ್ತುತ ಆರೋಗ್ಯ ಸವಾಲುಗಳ ಕುರಿತು ಚರ್ಚೆ ನಡೆಯಲಿದೆ. ಅ. 24ರಂದು ಬೆಳಿಗ್ಗೆ 10ಕ್ಕೆ ನಡೆಯುವ ಸಿಎಂಇ ಉದ್ಘಾಟನೆಯಲ್ಲಿ ಆಂಧ್ರಪ್ರದೇಶ ಐಎಂಎ ನಿಯೋಜಿತ ರಾಜ್ಯಾಧ್ಯಕ್ಷ ಡಾ. ಪಿ.ಎಸ್. ಶರ್ಮಾ ಹಾಗೂ ಕರ್ನಾಟಕ ವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ ಭಾಗವಹಿಸಲಿದ್ದಾರೆ ಎಂದರು.
ಶಿವಮೊಗ್ಗದ ಡಾಕ್ಟರ್ ಸೇರಿ ಹಲವರಿಗೆ ಸನ್ಮಾನ
ಸಮ್ಮೇಳನದ ವೈಜ್ಞಾನಿಕ ಸಮಿತಿ ಅಧ್ಯಕ್ಷ ಡಾ. ಎನ್. ಶ್ರೀಕಾಂತ್ ಹೆಗ್ಡೆ ಮಾತನಾಡಿ, ಡಾ. ಪಿ. ನಾರಾಯಣ ಹಾಗೂ ಡಾ. ಶಿವರಾಮಕೃಷ್ಣ ಅವರ ವಿಶೇಷ ಉಪನ್ಯಾಸಗಳು ನಡೆಯಲಿವೆ. ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಸೇವೆಯನ್ನು ಗುರುತಿಸಿ ಡಾ. ಪ್ರಶಾಂತ್ ಇಸ್ಲೂರು ಅವರನ್ನು ಸನ್ಮಾನಿಸಲಾಗುವುದು ಎಂದರು.
ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ ಗಣ್ಯರಿಗೆ ಐಎಂಎ ಸಾರ್ವಜನಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಐದು ದಶಕಗಳ ಪತ್ರಿಕೋದ್ಯಮ ಸೇವೆ ಸಲ್ಲಿಸಿರುವ ‘ಶಿವಮೊಗ್ಗ ಟೈಮ್ಸ್’ ಸಂಪಾದಕ ಎಸ್. ಚಂದ್ರಕಾಂತ್, ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಸಹಾಯಕ ಪ್ರಾಧ್ಯಾಪಕ ಹಾಗೂ ಹಸಿರು ತಂತ್ರಜ್ಞಾನ ಸಲಹೆಗಾರ ಪ್ರೊ. ಎಲ್.ಕೆ. ಶ್ರೀಪತಿ ಮತ್ತು ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ವಸಂತಕುಮಾರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ವೈಜ್ಞಾನಿಕ ಜ್ಞಾನ ವಿನಿಮಯ, ಪ್ರಾಯೋಗಿಕ ತರಬೇತಿ ಹಾಗೂ ತಜ್ಞರ ಉಪನ್ಯಾಸಗಳ ಮೂಲಕ ವೈದ್ಯಕೀಯ ಕ್ಷೇತ್ರದ ವೃತ್ತಿಪರ ಬೆಳವಣಿಗೆಗೆ ಸಮ್ಮೇಳನ ಸಹಕಾರಿಯಾಗಲಿದೆ ಎಂದರು.
ಎರಡನೇ ಬಾರಿ ಪ್ರಶಸ್ತಿ
ಐಎಂಎ ರಾಜ್ಯ ಶಾಖೆಯ ಅತ್ಯುತ್ತಮ ಶಾಖೆ ಪ್ರಶಸ್ತಿಯನ್ನು ಶಿವಮೊಗ್ಗ ಶಾಖೆ ಸತತ ಎರಡನೇ ವರ್ಷವೂ ಪಡೆದುಕೊಂಡಿದೆ ಎಂದು ಡಾ. ಪಿ. ನಾರಾಯಣ ತಿಳಿಸಿದರು. ಐಎಂಎ ಮಹಿಳಾ ಘಟಕಕ್ಕೂ ಈ ಬಾರಿ ಅತ್ಯುತ್ತಮ ಶಾಖೆ ಪ್ರಶಸ್ತಿ ಲಭಿಸಿದೆ. ಅ. 24ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಶಾಖೆಯ ಪದಾಧಿಕಾರಿಗಳು ಹಾಗೂ ಸದಸ್ಯರ ಸಾಮೂಹಿಕ ಪ್ರಯತ್ನಕ್ಕೆ ಸಂದ ಗೌರವ ಇದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಅಧ್ಯಕ್ಷ ಡಾ. ಕೆ.ಆರ್. ರವೀಶ್, ಸಂಘಟನಾ ಕಾರ್ಯದರ್ಶಿ ಡಾ. ವಿನಯ ಶ್ರೀನಿವಾಸ್, ಡಾ. ಎಚ್. ನಾಗರಾಜ್, ಡಾ. ಕೆ.ಆರ್. ಶ್ರೀಧರ್, ಡಾ. ಪುರುಷೋತ್ತಮ, ಡಾ. ಕೆ.ಎಸ್. ಶುಭ್ರತಾ, ಡಾ. ಹಂಸವೇಣಿ ಹಾಗೂ ಡಾ. ಕೌಸ್ತುಭ ಇದ್ದರು.