ಶಿಕಾರಿಪುರ: ತಾಲ್ಲೂಕಿನ ತರಲಘಟ್ಟ ಕ್ಯಾಂಪ್ ಬಳಿ ಶಿವಮೊಗ್ಗ–ಶಿಕಾರಿಪುರ–ಹಾನಗಲ್ ರಾಜ್ಯ ಹೆದ್ದಾರಿಯಲ್ಲಿ ಕಾರು ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. (ಈ ಸುದ್ದಿಯನ್ನು ಇನ್ನು 43 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಸಮೀಪದ ಮುತ್ತಿಗೆ ಗ್ರಾಮದ ನಿವಾಸಿಗಳಾದ ಕಾರು ಚಾಲಕ ಸಿದ್ದು (34) ಹಾಗೂ ಲಲಿತಮ್ಮ (65) ಮೃತ ದುರ್ದೈವಿಗಳು. ಅಪಘಾತದಲ್ಲಿ ಉಜ್ಜಪ್ಪ (74), ಹನುಮಂತಪ್ಪ (65) ಹಾಗೂ ಜಯಮ್ಮ (55) ಎಂಬುವವರು ಗಾಯಗೊಂಡಿದ್ದಾರೆ. ಈ ಪೈಕಿ ಜಯಮ್ಮ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಮುತ್ತಿಗೆ ಗ್ರಾಮದ ಐವರು ಶಿವಮೊಗ್ಗದ ಆಸ್ಪತ್ರೆಗೆ ಕಾರಿನಲ್ಲಿ ಬಂದು ವಾಪಸ್ ಶಿಕಾರಿಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಅಡಿಕೆ ತುಂಬಿಕೊಂಡು ಶಿವಮೊಗ್ಗದತ್ತ ಬರುತ್ತಿದ್ದ ಕ್ಯಾಂಟರ್ ಹಾಗೂ ಕಾರಿನ ಮಧ್ಯೆ ತರಲಘಟ್ಟ ಕ್ಯಾಂಪ್ ಸಮೀಪ ಮುಖಾಮುಖಿ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಶಿಕಾರಿಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.