ಶಿವಮೊಗ್ಗ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್ಒಯು) ನಡೆದ ಪದವಿ ಪರೀಕ್ಷಾ ಅಕ್ರಮ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಇಲ್ಲಿನ ಪ್ರಾದೇಶಿಕ ಕೇಂದ್ರದಕ್ಕೆ ಮುತ್ತಿಗೆ ಹಾಕಿದರು. ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ನಿರ್ದೇಶಕ ಸ್ವಾಮಿ ಬಿ.ಎಂ. ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. (ಈ ಸುದ್ದಿಯನ್ನು ಇನ್ನು 67 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಕೆಎಸ್ಒಯು ಕಚೇರಿಗೆ ಮುತ್ತಿಗೆ
ಆಲ್ಕೊಳ ಸರ್ಕಲ್ ಸಮೀಪವಿರುವ ಕೆಎಸ್ಒಯು ಪ್ರಾದೇಶಿಕ ಕಚೇರಿಗೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಇದಕ್ಕೆ ಮುನ್ನ ಪ್ರತಿಭಟನೆ ನಡೆಸಿದೆ ಎಬಿವಿಪಿ ಕಾರ್ಯಕರ್ತರು ಕೆಎಸ್ಒಯು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ವಿದ್ಯಾರ್ಥಿಗಳಿಂದ ಮತ್ತೆ ಹಣ ಪಡೆಯದೇ ತಕ್ಷಣವೇ ಮರುಪರೀಕ್ಷೆ ನಡೆಸಬೇಕು ಹಾಗೂ ಅಕ್ರಮ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ದುಡ್ಡು ಕೊಟ್ಟರೆ ಕಾಪಿಗೆ ಅವಕಾಶ
ಪರೀಕ್ಷೆ ವೇಳೆ ಅಭ್ಯರ್ಥಿಗಳು ಮೊಬೈಲ್ ಫೋನ್ ಹಾಗೂ ಪುಸ್ತಕಗಳನ್ನು ಮುಂದಿಟ್ಟುಕೊಂಡು ನಕಲು ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಣ ನೀಡಿದ ವಿದ್ಯಾರ್ಥಿಗಳಿಗೆ ಕೇಂದ್ರದ ಎರಡನೇ ಮಹಡಿಯಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ, ಸಿಬ್ಬಂದಿಯನ್ನು ಕಾವಲಿಗೆ ಇಡಲಾಗಿತ್ತು. ಪ್ರತಿ ವಿಷಯಕ್ಕೆ ₹1000ದಂತೆ ಪ್ರತಿ ವಿದ್ಯಾರ್ಥಿಯಿಂದ ಲಂಚ ಪಡೆಯಲಾಗಿತ್ತು ಎಂದು ಆರೋಪಿಸಲಾಗಿತ್ತು. ಈ ವಿಡಿಯೋಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತು.
ಸೇವೆಯಿಂದ ಬಿಡುಗಡೆ
ಪರೀಕ್ಷಾ ನಕಲು ಮತ್ತು ಲಂಚದ ಆರೋಪದಿಂದ ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ಉಂಟಾದ ಹಿನ್ನೆಲೆ, ಕುಲಪತಿಗಳ ನಿರ್ದೇಶನದಂತೆ ಪ್ರಾದೇಶಿಕ ನಿರ್ದೇಶಕ ಸ್ವಾಮಿ ಬಿ.ಎಂ. ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿ ಅಕ್ಟೋಬರ್ 23ರಂದು ಕುಲಸಚಿವರು ಆದೇಶ ಹೊರಡಿಸಿದ್ದಾರೆ. ಹಾವೇರಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ರಾಘವೇಂದ್ರ ಕುಲಕರ್ಣಿ ಅವರಿಗೆ ಶಿವಮೊಗ್ಗ ಕೇಂದ್ರದ ಹೆಚ್ಚುವರಿ ಉಸ್ತುವಾರಿ ನೀಡಲಾಗಿದೆ.