ಮೊಬೈಲ್‌ ಸಿಮ್‌ ಪೋರ್ಟ್‌ ಮಾಡಿಸಿಕೊಂಡ ಶಿವಮೊಗದ ಇಂಜಿನಿಯರ್‌ಗೆ ಪೊಲೀಸರಿಂದ ಫೋನ್‌, ಆಗಿದ್ದೇನು?

ಶಿವಮೊಗ್ಗ: ಸಿಮ್ ಪೋರ್ಟಿಂಗ್ ಹಾಗೂ ಉಚಿತ ನೆಕ್ ಇಯರ್ ಬ್ಯಾಂಡ್ ನೀಡುವುದಾಗಿ ನಂಬಿಸಿ ಸಾರ್ವಜನಿಕರ ವೈಯಕ್ತಿಕ ದಾಖಲೆ ಹಾಗೂ ಫೋಟೋಗಳನ್ನು ಪಡೆದು ಅವುಗಳನ್ನು ಸೈಬರ್‌ ಅಪರಾಧಕ್ಕೆ ಬಳಕೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಿವಮೊಗ್ಗದ ಇಂಜಿನಿಯರ್‌ ಒಬ್ಬರು ಈ ಸಂಬಂಧ ದೂರು ನೀಡಿದ್ದಾರೆ. (ಈ ಸುದ್ದಿಯನ್ನು ಇನ್ನು 51 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಕೆಲವು ತಿಂಗಳ ಹಿಂದ ಶಿವಮೊಗ್ಗ ಇಂಜಿನಿಯರ್‌ ಬಳಿ ಇಬ್ಬರು ಯುವಕರು ತಮ್ಮನ್ನು ಏರ್‌ಟೆಲ್ ಹಾಗೂ ಜಿಯೋ ಕಂಪನಿಯ ಸಿಮ್ ಏಜೆಂಟ್‌ಗಳೆಂದು ಪರಿಚಯಿಸಿಕೊಂಡಿದ್ದರು. ತಮ್ಮ ಬಳಿ ಇರುವ ಸಿಮ್‌ಗಳನ್ನು ಪೋರ್ಟ್ ಮಾಡಿಕೊಟ್ಟರೆ ಉಚಿತವಾಗಿ ನೆಕ್ ಇಯರ್ ಬ್ಯಾಂಡ್ ನೀಡುವುದಾಗಿ ತಿಳಿಸಿದ್ದರು. ಅದನ್ನು ನಂಬಿದ ಇಂಜಿನಿಯರ್‌ ತಮ್ಮ ದಾಖಲೆ ನೀಡಿದ್ದರು. ಆ ಯುವಕರು ಸ್ಥಳದಲ್ಲೇ ಅವರ ಮೊಬೈಲ್ ಮೂಲಕ ಫೋಟೋ ಹಾಗೂ ಇತರ ದಾಖಲೆಗಳನ್ನು ಪಡೆದು ಹೊಸ ಸಿಮ್ ಪೋರ್ಟ್ ಮಾಡಿಕೊಟ್ಟು ತೆರಳಿದ್ದರು ಎಂದು ಆರೋಪಿಸಲಾಗಿದೆ.

Shimogga-Cyber-Crime-CEN-Police-Station

ಶಿವಮೊಗ್ಗ ಸಿಇಎನ್ ಠಾಣೆಯ ಪೊಲೀಸ್‌ ಸಿಬ್ಬಂದಿಯೊಬ್ಬರು ಇತ್ತೀಚೆಗೆ ಇಂಜಿನಿಯರ್‌ಗೆ ಕರೆ ಮಾಡಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇಂಜಿನಿಯರ್‌ ನೀಡಿದ್ದ ದಾಖಲೆ, ಫೋಟೋ ಬಳಸಿ ಯುವಕರು ಮತ್ತೊಂದು ನಂಬರ್‌ನ ಸಿಮ್ ಕಾರ್ಡ್ ಪಡೆದು, ಅದನ್ನು ಸೈಬರ್ ಅಪರಾಧಕ್ಕೆ ಬಳಸಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಸಿಮ್‌ ಏಜೆಂಟ್‌ಗಳ ವಿರುದ್ಧ ಶಿವಮೊಗ್ಗದ ಸಿ.ಇ.ಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.