ಶಿವಮೊಗ್ಗದಲ್ಲಿ ನಾಲ್ಕು ದಿನ ಕೃಷಿ ಮೇಳ, 600 ಮಳಿಗೆ, ತಜ್ಞರ ಜೊತೆ ಸಂವಾದ, ಏನೇನೆಲ್ಲ ಇರಲಿದೆ?

ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಅಕ್ಟೋಬರ್ 30 ರಿಂದ ನವೆಂಬರ್ 2 ರವರೆಗೆ ನಗರದ ನವಿಲೆ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳ-2026 ಆಯೋಜಿಸಿದೆ. (ಈ ಸುದ್ದಿಯನ್ನು ಇನ್ನು 133 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕುಲಪತಿ ಡಾ. ಎಂ.ವಿ. ಧನಂಜಯ, “ಈ ಬಾರಿಯ ಕೃಷಿ ಮೇಳವನ್ನು ‘ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ’ ಎಂಬ ಧ್ಯೇಯವಾಕ್ಯದಡಿ ಹಮ್ಮಿಕೊಳ್ಳಲಾಗಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮೇಳದ ಪ್ರಯೋಜನ ಪಡೆದುಕೊಳ್ಳಬೇಕು” ಎಂದರು.

Keladi-Shivappa-Nayaka-Agriculture-University-Vice-Chancellor-Dr-Dhananjaya-Press-Meet

600ಕ್ಕೂ ಹೆಚ್ಚು ಮಳಿಗೆಗಳು

ಮೇಳದಲ್ಲಿ ಕೃಷಿ ಪರಿಕರಗಳು, ಯಂತ್ರೋಪಕರಣಗಳು, ಬೀಜ-ರಸಗೊಬ್ಬರಗಳು, ಸಸಿಗಳು ಹಾಗೂ ಪ್ರಾತ್ಯಕ್ಷಿಕೆಗಳಿಗಾಗಿ 600ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತಿದೆ. ಇದರಲ್ಲಿ ಬೀಜ-ಸಸಿಗಳು 50, ಕೀಟನಾಶಕ 80, ಕೃಷಿ ಸಲಕರಣೆ 35, ಮೌಲ್ಯವರ್ಧಿತ ಆಹಾರ 40, ಎಫ್‌ಪಿಒ/ಸ್ವಸಹಾಯ ಗುಂಪುಗಳು 30, ನರ್ಸರಿ 15 ಹಾಗೂ 60 ಆಹಾರ ಮಳಿಗೆಗಳು ಸೇರಿವೆ. ಐಸಿಎಆರ್‌ನ 15ಕ್ಕೂ ಹೆಚ್ಚು ಸಂಶೋಧನಾ ಸಂಸ್ಥೆಗಳು ಹಾಗೂ 80 ಸರ್ಕಾರಿ ಇಲಾಖೆಗಳು ಭಾಗವಹಿಸಲಿವೆ.

ರೈತರೊಂದಿಗೆ ತಜ್ಞರ ಸಂವಾದ

ಮೇಳದಲ್ಲಿ ಮೂರು ದಿನಗಳ ಕಾಲ ವಿಭಿನ್ನ ವಿಷಯಗಳ ಕುರಿತು ಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮಗಳು ನಡೆಯಲಿವೆ.

  • ಅಕ್ಟೋಬರ್‌ 30: ಬರಕ್ಕೆ ಹೆದರದ ನೈಸರ್ಗಿಕ ಕೃಷಿ: ಜೀವಂತ ಮಣ್ಣಿನ ಜೀವ ಶಕ್ತಿ
  • ಅಕ್ಟೋಬರ್‌ 31: ಆಧುನಿಕ ಕೃಷಿ ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಮಹಿಳೆಯರ ಪಾತ್ರ (ಅಂತರರಾಷ್ಟ್ರೀಯ ಮಹಿಳಾ ವರ್ಷದ ಹಿನ್ನೆಲೆ)
  • ನವೆಂಬರ್ 1: ಡಿಜಿಟಲ್ ಕೃಷಿ: ಅವಕಾಶಗಳು, ಸವಾಲುಗಳು ಮತ್ತು ಮುಂದಿನ ದಾರಿ

ಹಲವು ವಿಶೇಷ ಆಕರ್ಷಣೆ, ಕೋಣದ ಕಣೆ

ಮೇಳದಲ್ಲಿ ಬರ ನಿರ್ವಹಣೆ, ಅಡಿಕೆ, ಮೀನುಗಾರಿಕೆ, ಹೈನುಗಾರಿಕೆ, ಕುರಿ-ಮೇಕೆ, ಏಡಿ ಸಾಕಣೆ, ಮುತ್ತು ಕೃಷಿ ಹಾಗೂ ಬ್ಲಾಕ್ ಸೋಲ್ಜರ್ ಫ್ಲೈ ಪ್ರದರ್ಶನ ಇರಲಿದೆ. ಮಲೆನಾಡಿನಲ್ಲಿ ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ಕಬ್ಬಿನ ಗಾಣದ ‘ಕೋಣದ ಕಣೆ’ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ. ಶ್ವಾನ ಪ್ರದರ್ಶನ, ಜಾನುವಾರು ಸ್ಪರ್ಧೆ, ಸಿರಿಧಾನ್ಯ ಪಾಕ ಸ್ಪರ್ಧೆ ಹಾಗೂ ಮೀನುಗಾರಿಕೆ ಇಲಾಖೆಯ ಮತ್ಸ್ಯಾಂಗಣ ಆಯೋಜಿಸಲಾಗಿದೆ.

ಹೊಸ ತಳಿ, ಎಐ ತಂತ್ರಾಂಶ ಬಿಡುಗಡೆ

ವಿಶ್ವವಿದ್ಯಾಲಯವು ಆವಿಷ್ಕರಿಸಿದ ಬಹುಉಪಯೋಗಿ ಕೃಷಿ ಉಪಕರಣ ಹಾಗೂ ಸೋಲಾರ್ ಮಲ್ಟಿಗ್ರೇನ್ ಕ್ಲೀನರ್ ತಂತ್ರಜ್ಞಾನಗಳಿಗೆ ಪೇಟೆಂಟ್ ಲಭಿಸಿದೆ. ಸಹ್ಯಾದ್ರಿ ಸಿಂಧೂರ ಕೆಂಪು ಭತ್ತ ಮತ್ತು ಸಹ್ಯಾದ್ರಿ ಪ್ರಗತಿ ಕಡಲೆ ತಳಿಗಳಿಗೆ ಕೇಂದ್ರದ ಅನುಮೋದನೆ ಸಿಕ್ಕಿದೆ. ಮೇಳದ ವೇಳೆ ಆಗ್ರೋಮೆಟ್ ಎಐ ವಾಟ್ಸಪ್ ಬಾಟ್, ಸಹ್ಯಾದ್ರಿ ಎಐ ಸಮಾಲೋಚನಾ ತಂತ್ರಾಂಶ ಹಾಗೂ ಹೊಸ ಭತ್ತದ ತಳಿ ಸಹ್ಯಾದ್ರಿ ಅನ್ನಪೂರ್ಣ ಬಿಡುಗಡೆಯಾಗಲಿದೆ. ಜೊತೆಗೆ 7 ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಕುಲಪತಿ ಡಾ. ಎಂ.ವಿ. ಧನಂಜಯ ತಿಳಿಸಿದರು.

ಉದ್ಘಾಟನೆಗೆ ಯಾರೆಲ್ಲ ಬರ್ತಿದ್ದಾರೆ?

ಪದ್ಮಶ್ರೀ ಪುರಸ್ಕೃತ ಪ್ರಗತಿಪರ ರೈತ ಸತ್ಯನಾರಾಯಣ ಬೇಲೇರಿ ಅಕ್ಟೋಬರ್ 30 ರಂದು ಕೃಷಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೃಷಿ ಮೇಳ ಉದ್ಘಾಟಿಸಲಿದ್ದಾರೆ. ಕೃಷಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ವಸ್ತುಪ್ರದರ್ಶನ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಾಂತ್ರಿಕ ಕೈಪಿಡಿ ಬಿಡುಗಡೆ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಂತ್ರಜ್ಞಾನ ಉದ್ಯಾನವನ ಉದ್ಘಾಟಿಸಲಿದ್ದಾರೆ. ಶಾಸಕಿ ಶಾರದಾ ಪೂರ್ಯಾನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. 6 ಜಿಲ್ಲೆಗಳ 12 ಪ್ರಗತಿಪರ ರೈತ-ರೈತ ಮಹಿಳೆಯರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ವಿವಿಯ ಸಂಶೋಧನಾ ನಿರ್ದೇಶಕ ಶ್ರೀಧರ್, ಡಾ. ವೀರಣ್ಣ, ಡಾ. ಮಾರ್ಕರ್, ಡಾ. ಎಸ್.ಯು. ಪಾಟೀಲ್, ಡಾ. ಅವಿನಾಶ್, ಪ್ರಿಯಾಂಕ, ಡಾ. ರಾಘವೇಂದ್ರ ಮೇಸ್ತ ಉಪಸ್ಥಿತರಿದ್ದರು.