ಶಿವಮೊಗ್ಗ: ನಗರದಲ್ಲಿ ಫುಟ್‌ಪಾತ್ ಒತ್ತುವರಿ ವಿರುದ್ಧ ಸಂಚಾರ ಪೊಲೀಸರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ಜಂಟಿ ಸಮರ ಮುಂದುವರೆದಿದೆ. ನಗರದ ಲಕ್ಷ್ಮಿ ಟಾಕೀಸ್ ವೃತ್ತದಲ್ಲಿ ಇಂದು ಕಾರ್ಯಾಚರಣೆ ನಡೆಯಿತು. (ಈ ಸುದ್ದಿಯನ್ನು ಇನ್ನು 42 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿದ್ದ ಅಂಗಡಿ ಮುಂಗಟ್ಟುಗಳು, ಫುಟ್‌ಪಾತ್ ಮೇಲಿದ್ದ ವ್ಯಾಪಾರ ಮಳಿಗೆಗಳು ಹಾಗೂ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಯಿತು. ಜೆಸಿಬಿ ಬಳಸಿ ಅಂಗಡಿ ಮುಂಗಟ್ಟು ತೆರವು ಮಾಡಲಾಯಿತು. ಇನ್ನು, ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದ ಮರದ ರೆಂಬೆಗಳನ್ನು ತುಂಡರಿಸಲಾಯಿತು.

ವ್ಯಾಪಾರಿಗಳಿಗೆ ಪರ್ಯಾಯ ಜಾಗ
ಶಿವಾಲಯದ ಪಕ್ಕದಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸಲು ಮಹಾನಗರ ಪಾಲಿಕೆಯಿಂದ ಈಗಾಗಲೇ ಪ್ರತ್ಯೇಕ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಆದರೂ ಕೆಲವು ವ್ಯಾಪಾರಿಗಳು ಮಳಿಗೆಗಳನ್ನು ಬಿಟ್ಟು ಫುಟ್‌ಪಾತ್ ಮೇಲೆ ವ್ಯಾಪಾರ ನಡೆಸುತ್ತಿದ್ದುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿತ್ತು. ಇನ್ಮುಂದೆ ಮಹಾನಗರ ಪಾಲಿಕೆ ಸೂಚಿಸಿದ ಸ್ಥಳದಲ್ಲಿಯೇ ವ್ಯಾಪಾರ ನಡೆಸಬೇಕು ಎಂದು ಸಂಚಾರ ಪೊಲೀಸರು ವ್ಯಾಪಾರಿಗಳಿಗೆ ಸೂಚಿಸಿದರು. ಸಂಚಾರ ಠಾಣೆ ಇನ್ಸ್‌ಪೆಕ್ಟರ್ ದೇವರಾಜ್, ಪಿಎಸ್‌ಐ ಸ್ವಪ್ನಾ, ಮಹಾನಗರ ಪಾಲಿಕೆ ಸಿಬ್ಬಂದಿಗಳು ತೆರವು ಕಾರ್ಯಾಚರಣೆ ವೇಳೆ ಇದ್ದರು.