ಶಿವಮೊಗ್ಗ: ಋತುಮಾನಕ್ಕೆ ಅನುಗುಣವಾಗಿ ಲಭ್ಯವಾಗುವ ವಿವಿಧ ಬಗೆಯ ದೇಶಿ ಹಾಗೂ ವಿದೇಶಿ ಹಣ್ಣುಗಳನ್ನು ಒಂದೇ ಸೂರಿನಡಿ ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ ನೂತನ ಹಣ್ಣು ಮತ್ತು ಜ್ಯೂಸ್ ಮಾರಾಟ ಮಳಿಗೆ ಆರಂಭಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್. ವಿಜಯಕುಮಾರ್ ತಿಳಿಸಿದರು. (ಈ ಸುದ್ದಿಯನ್ನು ಇನ್ನು 69 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧಿ ಪಾರ್ಕ್ ಸಮೀಪದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಹಾಪ್ ಕಾಮ್ಸ್ ಪ್ರಧಾನ ಕಚೇರಿಯ ಕೆಳಭಾಗದಲ್ಲಿ ನ.6ರಂದು ಬೆಳಿಗ್ಗೆ 11 ಗಂಟೆಗೆ ಮಳಿಗೆ ಉದ್ಘಾಟನೆಯಾಗಲಿದೆ ಎಂದರು.

ಯಾವೆಲ್ಲ ಹಣ್ಣು ದೊರೆಯಲಿವೆ?
ಮಾರುಕಟ್ಟೆಯಲ್ಲಿ ಆಯಾ ಕಾಲಕ್ಕೆ ಲಭ್ಯವಾಗುವ ಎಲ್ಲ ಬಗೆಯ ಹಣ್ಣುಗಳನ್ನು ಮಳಿಗೆಯಲ್ಲಿ ಇರಿಸಲು ಉದ್ದೇಶಿಸಲಾಗಿದೆ. ಲಿಚ್ಚಿ, ರಾಂಬುಟಾನ್, ಲಾಂಗನ್, ಆಸ್ಟ್ರೇಲಿಯನ್ ದ್ರಾಕ್ಷಿ, ಸ್ಟಾರ್ ಫ್ರೂಟ್, ಡ್ರ್ಯಾಗನ್ ಫ್ರೂಟ್, ಚೆರ್ರಿ, ಮ್ಯಾಂಡರಿನ್, ಕಿವಿ, ಸೀಡ್ಲೆಸ್ ದ್ರಾಕ್ಷಿ, ನೇರಳೆ, ಬ್ಲೂಬೆರ್ರಿ ಹಾಗೂ ಸ್ಟ್ರಾಬೆರಿ ಸೇರಿದಂತೆ ವಿವಿಧ ಬಗೆಯ ದೇಶಿ ಮತ್ತು ವಿದೇಶಿ ಹಣ್ಣುಗಳು ಲಭ್ಯವಿರಲಿವೆ. ತಾಜಾ ಹಣ್ಣಿನ ಜ್ಯೂಸ್ ಮಾರಾಟ ಮಾಡಲಾಗುವುದು. ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವುದು ಸಂಸ್ಥೆಯ ಉದ್ದೇಶ ಎಂದು ವಿಜಯಕುಮಾರ್ ತಿಳಿಸಿದರು.
ಇತ್ತೀಚೆಗೆ ನಡೆದ ಕೃಷಿ ಮೇಳದಲ್ಲಿ ಪ್ರದರ್ಶಿಸಿದ್ದ ಪ್ರಗತಿಪರ ಕೃಷಿಕ ಕೆ. ನಾಗರಾಜ್ ಅವರ ತೋಟದಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಸೀಬೆಹಣ್ಣಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿತ್ತು. ಸುಮಾರು 10 ಕ್ವಿಂಟಲ್ ಹಣ್ಣು ಮಾರಾಟವಾಗಿದ್ದು, ಇದು ಸಂಸ್ಥೆಗೆ ಉತ್ತೇಜನ ನೀಡಿದೆ. ಹಾಪ್ ಕಾಮ್ಸ್ನ ಸಾವಯವ ಗೊಬ್ಬರ ಬಳಸಿ ಈ ಹಣ್ಣುಗಳನ್ನು ಬೆಳೆಯಲಾಗಿದೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ಅಕ್ಷಯ್, ನಿರ್ದೇಶಕರಾದ ಶರತ್ ಮರಿಯಪ್ಪ, ನಾಗೇಶ್ ನಾಯ್ಕ್, ನಾಗರಾಜ್ ಗೌಡ್ರು, ಕಾಂತರಾಜ್, ಮೋಹನ್ ಗೌಡ, ಹಾಗೂ ಮಳಿಗೆ ನಿರ್ವಹಣೆಯ ಹೊಣೆ ಹೊತ್ತಿರುವ ಪ್ರಗತಿಪರ ಕೃಷಿಕ ಕೆ. ನಾಗರಾಜ್ ಇದ್ದರು.