ಡಿವಿಎಸ್‌ ಕಾಲೇಜಿನಲ್ಲಿ ಯುವ ಸೇತು ಆ್ಯಪ್, ಕೌಶಲ್ಯ ವೃದ್ಧಿಗೆ ಯುವನಿಧಿ ಪ್ಲಸ್‌ ಬಗ್ಗೆ ಜಾಗೃತಿ, ಏನಿದು?

ಶಿವಮೊಗ್ಗ: ಮಾಸಿಕ ಧನಸಹಾಯದೊಂದಿಗೆ ಕೌಶಲ್ಯ ತರಬೇತಿ ನೀಡಿ, ಯುವಶಕ್ತಿಯನ್ನು ಸದೃಢಗೊಳಿಸುವ ಯುವನಿಧಿ ಯೋಜನೆಯನ್ನು ಎಲ್ಲ ಅರ್ಹ ಯುವಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್ ತಿಳಿಸಿದರು. (ಈ ಸುದ್ದಿಯನ್ನು ಇನ್ನು 66 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ನಗರದ ಡಿವಿಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಯುವನಿಧಿ ಯೋಜನೆಯ ನೋಂದಣಿ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Guarantee-Scheme-Implementation-Committee-Chairman-CS-Chandrabhoopal-speaks-at-DVS-College

ಪದವೀಧರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯಡಿ ಪದವೀಧರರಿಗೆ ಪ್ರತಿ ತಿಂಗಳು ₹3,000 ಹಾಗೂ ಡಿಪ್ಲೋಮಾ ಮುಗಿಸಿದವರಿಗೆ ಪ್ರತಿ ತಿಂಗಳು ₹1,500 ಧನಸಹಾಯವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಯುವಜನತೆಯ ಮುಖಾಂತರ ರಾಷ್ಟ್ರವನ್ನು ಬಲಿಷ್ಠ ಹಾಗೂ ಸಮೃದ್ಧಿಯಾಗಿ ಕಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆ ತಂದಿದೆ ಎಂದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಡಿವಿಎಸ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ.ಡಿ ಮಾತನಾಡಿ, ಅಂತಿಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪ್ಲೇಸ್‌ಮೆಂಟ್ ಡ್ರೈವ್ ಹಾಗೂ ಭತ್ಯೆಯೊಂದಿಗೆ ಇಂಟರ್ನ್‌ಷಿಪ್ ವ್ಯವಸ್ಥೆ ಮಾಡಲಾಗಿದೆ. ಡಿಪ್ಲೊಮಾ ಮುಗಿದ ಮೇಲೆ ಯುವನಿಧಿ ಯೋಜನೆಯಡಿ ನೋಂದಣಿ ಮಾಡಿಕೊಂಡರೆ ಉದ್ಯೋಗ ಸಿಗುವವರೆಗೆ ಅಥವಾ ಎರಡು ವರ್ಷಗಳ ಅವಧಿವರೆಗೆ ಭತ್ಯೆ ದೊರೆಯಲಿದೆ ಎಂದು ವಿವರಿಸಿದರು.

ಜಿಲ್ಲಾ ಉದ್ಯೋಗಾಧಿಕಾರಿ ಅಶೋಕ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಪದವಿಗೆ ಸೀಮಿತವಾಗದೆ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಸಿಎನ್‌ಸಿ ಆಪರೇಟರ್, ಫಿಟ್ಟರ್, ಎಲೆಕ್ಟ್ರಿಷಿಯನ್, ಸೋಲಾರ್ ಟೆಕ್ನಿಷಿಯನ್ ಮುಂತಾದ ಕೌಶಲ್ಯ ಕೋರ್ಸ್‌ಗಳನ್ನು ಕಲಿಯುವುದು ಅಗತ್ಯ. ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಗೆ ತರಲು ‘ಯುವ ಸೇತು’ ಆ್ಯಪ್ ಹಾಗೂ ಕೌಶಲ್ಯ ವೃದ್ಧಿಗೆ ‘ಯುವನಿಧಿ ಪ್ಲಸ್’ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತರಬೇತುದಾರ ನಿರಂಜನ್ ಆರ್., ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.