ಶಿವಮೊಗ್ಗ: ಮಾಜಿ ಸಂಸದ ಹಾಗೂ ಹಿರಿಯ ನಾಯಕ ವಿ.ಎಸ್. ಉಗ್ರಪ್ಪ ಅವರ ವಿರುದ್ಧ ಆಧಾರರಹಿತ ಆರೋಪ ಮಾಡಿ ಘೆರಾವ್ ಹಾಕಿದ ಘಟನೆಯನ್ನು ವಾಲ್ಮೀಕಿ ನಾಯಕ ಯುವಕರ ಸಂಘ ಖಂಡಿಸಿದೆ. ಈ ಸಂಬಂಧ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. (ಈ ಸುದ್ದಿಯನ್ನು ಇನ್ನು 54 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಅಕ್ಟೋಬರ್ 29 ರಂದು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಎದುರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಕಡಿತದ ಕುರಿತು ವಿ.ಎಸ್.ಉಗ್ರಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿ ಹೊರಗೆ ತೆರಳುತ್ತಿದ್ದಾಗ ಕೆಲವರು ಆಧಾರರಹಿತ ಆರೋಪಗಳನ್ನು ಮಾಡಿ ಘೆರಾವ್ ಹಾಕಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯದಂತಹ ವಿಚಾರಗಳ ಕುರಿತು ಸಂವಿಧಾನಬದ್ಧವಾಗಿ ಪ್ರತಿಕ್ರಿಯಿಸಬೇಕೇ ಹೊರತು, ಹಿರಿಯ ನಾಯಕರ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರುವ ರೀತಿ ವರ್ತಿಸಬಾರದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಸಚಿವರು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಬಂಧಿತ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಯಿತು. ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭ ಸತೀಶ್ ವಡಿನಕೊಪ್ಪ, ಮೇಘರಾಜ್, ಬಿ.ಲೋಕೇಶ್, ವಿಶ್ವನಾಥ್, ನವೀನ್ ತಲಾರಿ, ಸಂಜಯ್, ರೂಪೇಶ್ ಹಾಗೂ ಸ್ವಸ್ತಿಕ್ ಉಪಸ್ಥಿತರಿದ್ದರು.