ಸಾಗರದಲ್ಲಿ KSRTC ಬಸ್‌ ಪಲ್ಟಿ ಪ್ರಕರಣ, ಚಾಲಕನ ವಿರುದ್ಧ ದಾಖಲಾಯ್ತು ಕೇಸ್‌, ಯಾಕೆ?

ಸಾಗರ: ನಗರದ ಬಿ.ಹೆಚ್. ರಸ್ತೆಯ ಬಸವನಹೊಳೆ ಬಳಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ ಹಲವು ಪ್ರಯಾಣಿಕರು ಗಾಯಗೊಂಡಿದ್ದ ಪ್ರಕರಣ ಸಂಬಂಧ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಕೋಲಾರ ಜಿಲ್ಲೆಯ ನಿರೂಪಮಾ ಎಂಬುವರು ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಆಧರಿಸಿ ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಈ ಸುದ್ದಿಯನ್ನು ಇನ್ನು 44 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಕೋಲಾರದ 18 ಜನರು ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕಾಗಿ ಬೆಂಗಳೂರಿನಿಂದ ಸಾಗರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ನವೆಂಬರ್ 1 ರ ಬೆಳಗಿನ ಜಾವ 4:45ರ ಹೊತ್ತಿಗೆ ಬಸ್ ಸಾಗರ ಟೌನ್ ಬಿ.ಹೆಚ್. ರಸ್ತೆಯ ಬಸವನಹೊಳೆ ಬಳಿ ಚಲಿಸುತ್ತಿದ್ದರು. ಚಾಲಕ ವೇಗವಾಗಿ ಚಾಲನೆ ಮಾಡಿ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆಸಿದ್ದರಿಂದ ಬಸ್ ರಸ್ತೆಯಲ್ಲೇ ಪಲ್ಟಿಯಾಯಿತು ಎಂದು ಆರೋಪಿಸಿದ್ದಾರೆ.

KSRTC-bus-overturn-at-sagara

ಅಪಘಾತದಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದರು. ಸ್ಥಳೀಯರು ಹಾಗೂ 108 ಆಂಬುಲೆನ್ಸ್ ಸಿಬ್ಬಂದಿ ಗಾಯಾಳುಗಳನ್ನು ತಕ್ಷಣವೇ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ. ಚಾಲಕನ  ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಸಾಗರ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.