ಶಿವಮೊಗ್ಗ: ಗುಜರಾತ್ನಲ್ಲಿ ನವೆಂಬರ್ 1 ರಂದು ನಡೆದ ರಾಷ್ಟ್ರೀಯ ಏಕತಾ ದಿನಾಚರಣೆಯ ಸಮಾರಂಭದಲ್ಲಿ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಶರಾವತಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶಿಸಿದ್ದರು. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೆಚ್ಚುಗೆಗೆ ಪಾತ್ರವಾಗಿದೆ. (ಈ ಸುದ್ದಿಯನ್ನು ಇನ್ನು 40 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ 16 ವಿದ್ಯಾರ್ಥಿಗಳು ಮಲೆನಾಡಿನ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನವನ್ನು ಪ್ರದರ್ಶಿಸಿ ಗಮನ ಸೆಳೆದಿದ್ದರು. ಕಲಾಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ತಮ್ಮ ಅಧಿಕೃತ ಫೇಸ್ಬುಕ್, ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ಪ್ರದರ್ಶನದ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿ ಹಂಚಿಕೊಂಡಿರುವ ಛಾಯಾಚಿತ್ರದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಾದ ಅಮೂಲ್ಯ, ವೈಶಾಲಿ ಹಾಗೂ ನಿಶ್ಚಿತಾ ಅವರು ಯಕ್ಷಗಾನ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದಾರೆ. ರಾಷ್ಟ್ರಮಟ್ಟದ ವೇದಿಕೆಯಲ್ಲಿ ಮಲೆನಾಡಿನ ಕಲೆಯನ್ನು ಪ್ರದರ್ಶಿಸಿ ಪ್ರಧಾನಿಯವರ ಪ್ರಶಂಸೆಗೆ ಪಾತ್ರವಾಗಿರುವುದು ಕಾಲೇಜಿಗೆ ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಪ್ರಧಾನಮಂತ್ರಿಯವರಿಗೆ ಎನ್ಇಎಸ್ (NES) ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಕಾಲೇಜಿನ ಪ್ರಾಚಾರ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.