ಶಿವಮೊಗ್ಗದಲ್ಲಿ ನವೆಂಬರ್‌ 6ರಂದ ಸರ್ಕಾರದ ವಿರುದ್ಧ ಬೀದಿಗಿಳಿಯಲಿದ್ದಾರೆ ಮಹಿಳೆಯರು

ಶಿವಮೊಗ್ಗ:’ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ಆಡಳಿತ ವೈಖರಿ ಖಂಡಿಸಿ ರಾಷ್ಟ್ರಭಕ್ತರ ಬಳಗದ ಮಹಿಳಾ ಘಟಕದ ವತಿಯಿಂದ ನ. 6ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ’ ಎಂದು ಘಟಕದ ಅಧ್ಯಕ್ಷೆ ಕೆಂಪಮ್ಮ ತಿಳಿಸಿದರು. (ಈ ಸುದ್ದಿಯನ್ನು ಇನ್ನು 102 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೈವಜ್ಞ ಕಲ್ಯಾಣ ಮಂದಿರದಿಂದ ಬೆಳಿಗ್ಗೆ 10.30ಕ್ಕೆ ಆರಂಭವಾಗುವ ಮೆರವಣಿಗೆ ದುರ್ಗಿಗುಡಿ ಮುಖ್ಯರಸ್ತೆ ಮೂಲಕ ಗೋಪಿವೃತ್ತ ತಲುಪಲಿದೆ. ಅಲ್ಲಿ ಸಭೆ ನಡೆಸಿ ಸರ್ಕಾರದ ವಿರುದ್ಧ ಪ್ರತಿಭಟನೆ ದಾಖಲಿಸಲಾಗುವುದು ಎಂದರು.

Rashtra-Bhaktara-Balaga-Women-Wing

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿದ್ಯುತ್, ಹಾಲು, ಬಸ್ ಪ್ರಯಾಣ, ಮದ್ಯ ಹಾಗೂ ಆಸ್ತಿ ನೋಂದಣಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬೆಲೆ ಏರಿಕೆಯಾಗಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನ ನಿರ್ವಹಣೆ ಕಷ್ಟವಾಗಿದೆ. ಹಾಲು ಮತ್ತು ಮೊಸರಿನ ದರ ಹೆಚ್ಚಳದಿಂದ ಮಹಿಳೆಯರು ಹಾಗೂ ಮಕ್ಕಳಿರುವ ಕುಟುಂಬಗಳಿಗೆ ಹೆಚ್ಚಿನ ಹೊರೆ ಉಂಟಾಗಿದೆ ಎಂದು ದೂರಿದರು.

ಚುನಾವಣೆಯಲ್ಲಿ ಭರವಸೆ ನೀಡಿದ್ದ ಗೃಹಲಕ್ಷ್ಮಿ ಯೋಜನೆಯ ಹಣ ಅರ್ಹ ಮಹಿಳೆಯರಿಗೆ ಸಕಾಲದಲ್ಲಿ ತಲುಪುತ್ತಿಲ್ಲ. ವೃದ್ಧಾಪ್ಯ ಮತ್ತು ವಿಧವಾ ವೇತನಗಳು ಹಲವು ತಿಂಗಳಿಂದ ಪಾವತಿಯಾಗದೆ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಸ್ ಪ್ರಯಾಣ ದರ ಹೆಚ್ಚಳಕ್ಕೂ ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

ಹಾಲಿನ ದರ ಲೆಕ್ಕ ಬಹಿರಂಗಪಡಿಸಿ

ಮಾಜಿ ಮೇಯರ್ ಸುವರ್ಣ ಶಂಕರ್ ಮಾತನಾಡಿ, ಹಾಲಿನ ದರ ಏರಿಕೆಯಿಂದ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ. ನೀಲಿ ಪ್ಯಾಕೆಟ್ ಹಾಲಿನ ದರ ₹8 ಹೆಚ್ಚಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ಆರೆಂಜ್ ಮತ್ತು ಗ್ರೀನ್ ಪ್ಯಾಕೆಟ್ ಹಾಲಿನ ದರ ₹12 ಹೆಚ್ಚಿಸಲಾಗಿದೆ. ಇದರಲ್ಲಿ ₹7 ರೈತರಿಗೆ,₹1 ಕೆಎಂಎಫ್ ನೀಡುವುದಾಗಿ ಹೇಳಿದ್ದು, ಉಳಿದ ₹4ರ ಹಣ ಎಲ್ಲಿಗೆ ಹೋಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಮಾಜಿ ಮೇಯರ್ ಸುವರ್ಣ ಶಂಕರ್ ಒತ್ತಾಯಿಸಿದರು.

ಪ್ರತಿದಿನ ಕೆಎಂಎಫ್‌ಗೆ 1.28 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಪ್ರತಿ ಲೀಟರ್‌ಗೆ ₹4ರಂತೆ ಲೆಕ್ಕ ಹಾಕಿದರೆ ವರ್ಷಕ್ಕೆ ಸುಮಾರು ₹1,869 ಕೋಟಿ ಆಗುತ್ತದೆ. ಈ ಹಣದ ಲೆಕ್ಕವನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದರು.

ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಹಿಂಪಡೆಯಬೇಕು. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸಕಾಲದಲ್ಲಿ ಪಾವತಿಸಬೇಕು. ಬಾಕಿ ಉಳಿದಿರುವ ವೃದ್ಧಾಪ್ಯ ಹಾಗೂ ವಿಧವಾ ವೇತನ ಬಿಡುಗಡೆ ಮಾಡಬೇಕು. ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಬಾರದು ಎಂದು ಆಗ್ರಹಿಸಿದರು.

ಮಹಾನಗರ ಪಾಲಿಕೆ ಮಾಜಿ ಮೇಯರ್ ಲತಾ ಗಣೇಶ್, ಮಾಜಿ ಉಪಮೇಯರ್ ಲಕ್ಷ್ಮಿ ಶಂಕರ್ ನಾಯಕ್, ಮಾಜಿ ಕಾರ್ಪೊರೇಟರ್ ಅನಿತಾ ಮಂಜುನಾಥ್, ಸೀತಾಲಕ್ಷ್ಮಿ, ಸುರೇಖಮ್ಮ, ಗೀತಮ್ಮ, ಶಶಿಕಲಾ, ಜ್ಯೋತಿ, ಶಂಕರ್ ನಾಯಕ್, ರಾಜಯ್ಯ ಮತ್ತಿತರರು ಇದ್ದರು.