ಶಿವಮೊಗ್ಗ: ಕಲ್ಪನಾಶಕ್ತಿ ಹೊಸ ಆಲೋಚನೆಗಳಿಗೆ ಜೀವ ತುಂಬಿದರೆ, ಆತ್ಮವಿಶ್ವಾಸ ಅವುಗಳನ್ನು ಸಾಧನೆಯ ಹಾದಿಯಲ್ಲಿ ಮುನ್ನಡೆಸುತ್ತದೆ. ಆದರೆ ಗೆಲುವಿಗೆ ಅರ್ಥಪೂರ್ಣ ಮೌಲ್ಯ ತಂದುಕೊಡುವುದು ಉತ್ತಮ ವ್ಯಕ್ತಿತ್ವ ಎಂದು ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು. (ಈ ಸುದ್ದಿಯನ್ನು ಇನ್ನು 57 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ ಕೌಶಲ್ಯ-3.0 ಉದ್ಘಾಟಿಸಿ ಅವರು ಮಾತನಾಡಿದರು. ಬದಲಾಗುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಜ್ಞಾನದ ಜತೆಗೆ ಕೌಶಲ್ಯ ಹಾಗೂ ಮಾನವೀಯ ಮೌಲ್ಯಗಳನ್ನು ವಿಕಸನಗೊಳಿಸಿಕೊಳ್ಳುವುದು ಅತ್ಯಗತ್ಯ ಎಂದರು.

ಅಂಕಗಳು ಶೈಕ್ಷಣಿಕ ಸಾಧನೆಯ ಮಾನದಂಡವಾಗಬಹುದೇ ಹೊರತು ಬದುಕಿನ ಯಶಸ್ಸಿನ ಏಕೈಕ ಅಳತೆಯಲ್ಲ. ಅಂಕಗಳಾಚೆಗಿನ ಕೌಶಲ್ಯಗಳೇ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕುತ್ತವೆ.
– ಎಸ್.ಎನ್. ನಾಗರಾಜ, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ
##550ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ
ಉತ್ಸವದಲ್ಲಿ ಮೊಬೈಲ್ ಫೋಟೋಗ್ರಫಿ, ಏಕವ್ಯಕ್ತಿ ಗಾಯನ, ರಸಪ್ರಶ್ನೆ, ಚಿತ್ರಕಲೆ, ಸಮೂಹ ನೃತ್ಯ, ಫ್ಯಾಷನ್ ಶೋ, ವಾಲಿಬಾಲ್ ಹಾಗೂ ಥ್ರೋಬಾಲ್ ಸೇರಿದಂತೆ ಹತ್ತಕ್ಕೂ ಹೆಚ್ಚು ಸ್ಪರ್ಧೆಗಳು ನಡೆದವು. ವಿವಿಧ ಪಿಯು ಕಾಲೇಜುಗಳ 550 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.
ಪ್ರಾಂಶುಪಾಲ ಡಾ. ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಎನ್ಇಎಸ್ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ, ನಿರ್ದೇಶಕ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಸಂಯೋಜಕರಾದ ಅರುಣ್ ಕುಮಾರ್ ಎಂ.ಎಸ್., ಸುಜಾತ ಆರ್., ಉದ್ಯಮಿ ಟಿ.ಆರ್. ಗಗನ್ ಹಾಗೂ ಗಾಯಕಿ ಚಾರ್ವಿ ಮುರಳೀಧರ್ ಉಪಸ್ಥಿತರಿದ್ದರು.