ಜೋಗ ಜಲಪಾತ:‌ ಹಣ, ಬಂಗಾರವಿದ್ದ ಬ್ಯಾಗ್‌ ಕಳೆದುಕೊಂಡ ದಂಪತಿ, ಪ್ರಮಾಣಿಕತೆ ಮೆರೆದ ಪೊಲೀಸ್

ಕಾರ್ಗಲ್: ಪ್ರವಾಸಕ್ಕೆ ಬಂದಿದ್ದ ದಂಪತಿ ಹಣ ಹಾಗೂ ಬಂಗಾರವಿದ್ದ ಬ್ಯಾಗ್‌ ಕಳೆದುಕೊಂಡಿದ್ದು, ಅದನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸುವ ಮೂಲಕ ಕಾರ್ಗಲ್ ಠಾಣೆಯ ಪೊಲೀಸರು ಪ್ರಾಮಾಣಿಕತೆ ಮೆರೆದಿದ್ದಾರೆ. (ಈ ಸುದ್ದಿಯನ್ನು ಇನ್ನು 36 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಬೆಂಗಳೂರು ಮೂಲದ ದಂಪತಿ ಶನಿವಾರ ಜೋಗ ಜಲಪಾತ ವೀಕ್ಷಣೆಗೆ ಬಂದಿದ್ದರು. ಈ ವೇಳೆ ರಾಣಿ ಜಲಪಾತದ ಸಮೀಪ ರಸ್ತೆ ಬದಿಯಲ್ಲಿ ಅವರ ಕೈಚೀಲ ಬಿದ್ದುಹೋಗಿತ್ತು. ಜಲಪಾತ ಪ್ರದೇಶದಲ್ಲಿ ಪ್ಯಾಟ್ರೋಲಿಂಗ್ ನಡೆಸುತ್ತಿದ್ದ ಕಾರ್ಗಲ್ ಪಿಎಸ್‌ಐ ಶ್ರೀಪತಿ ಗಿನ್ನಿ ಹಾಗೂ ಸಿಬ್ಬಂದಿಗೆ ರಸ್ತೆ ಬದಿಯಲ್ಲಿ ಕೈಚೀಲ ಕಂಡುಬಂದಿದೆ.

Kargal-Police-Station-Sagara-Taluk

ಚೀಲದಲ್ಲಿದ್ದ ಆಧಾರ್ ಕಾರ್ಡ್ ಪರಿಶೀಲಿಸಿದ ಪೊಲೀಸರು, ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ದಂಪತಿಯನ್ನು ಠಾಣೆಗೆ ಕರೆಸಿಕೊಂಡಿದ್ದಾರೆ. ಬಳಿಕ ಬಂಗಾರ ಹಾಗೂ ಹಣವಿದ್ದ ಚೀಲವನ್ನು ಅವರಿಗೆ ಹಸ್ತಾಂತರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಮಲ್ಲಪ್ಪ, ಅಣ್ಣಪ್ಪ ಹಾಗೂ ಪುರುಷೋತ್ತಮ್ ಉಪಸ್ಥಿತರಿದ್ದರು. ಪೊಲೀಸರ ಸಮಯಪ್ರಜ್ಞೆ ಹಾಗೂ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.‌