ಶಿವಮೊಗ್ಗ: ದೀಪಾವಳಿ ಹಬ್ಬದ ಸಡಗರದ ನಡುವೆ ಮಲೆನಾಡಿನ ವಿಶಿಷ್ಟ ಜಾನಪದ ಕಲೆಯಾದ ಅಂಟಿಗೆ ಪಂಟಿಕೆ ತಂಡಗಳು ಭಾನುವಾರ ಸಂಜೆ ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮನೆ-ಮನೆಗೆ ತೆರಳಿ ಜ್ಯೋತಿ ಬೆಳಗಿಸಿದವು. (ಈ ಸುದ್ದಿಯನ್ನು ಇನ್ನು 46 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಕರ್ನಾಟಕ ಜಾನಪದ ಪರಿಷತ್ತು, ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಆದಿಚುಂಚನಗಿರಿ ಕಾಲಭೈರವೇಶ್ವರ ದೇವಸ್ಥಾನದಿಂದ ಅಂಟಿಗೆ ಪಂಟಿಕೆಯ ಎರಡು ತಂಡಗಳು ನಗರದ ವಿವಿಧೆಡೆ ಸಂಚರಿಸಿದವು. ತೀರ್ಥಹಳ್ಳಿಯ ಬಂದ್ಯಾ ಗ್ರಾಮದ ರಾಜ್ಯ ಪ್ರಶಸ್ತಿ ಪುರಸ್ಕೃತ ತಂಡಗಳು, ನಗರದ 70ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿದವು. ಸಾಂಪ್ರದಾಯಿಕ ಹಾದಿ ಪದ ಹಾಗೂ ಬಾಗಿಲು ಪದಗಳನ್ನು ಹಾಡುವ ಮೂಲಕ ದೀಪಾವಳಿಯ ಶುಭಾಶಯ ಕೋರಿದವು.
ಮನೆಯ ಹೊಸ್ತಿಲ ಬಳಿ ಜಾನಪದ ಹಾಡುಗಳನ್ನು ಹಾಡಿ ಶುಭ ಕೋರಿದಾಗ, ಸಾರ್ವಜನಿಕರು ಭಕ್ತಿಯಿಂದ ಜ್ಯೋತಿಯನ್ನು ಬರಮಾಡಿಕೊಂಡು ದೀಪಕ್ಕೆ ಎಣ್ಣೆ ಎರೆಯುವ ಮೂಲಕ ಪೂಜೆ ಸಲ್ಲಿಸಿದರು. ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಜಾನಪದ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ, ಪದಾಧಿಕಾರಿಗಳಾದ ಭೈರಾಪುರ ಶಿವಪ್ಪ, ಕೃಷ್ಣಮೂರ್ತಿ ಹಿಳ್ಳೋಡಿ, ನಾರಾಯಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.