ದೇಶಕ್ಕೆ ಫಸ್ಟ್: ಭದ್ರಾವತಿಯಲ್ಲಿ ಶ್ರೇಯಾಗೆ ಅದ್ಧೂರಿ ಸ್ವಾಗತ, ಗಣ್ಯರಿಂದ ಸನ್ಮಾನ, ಹೇಗಿತ್ತು ಸಂಭ್ರಮ?

ಭದ್ರಾವತಿ: ಕೇಂದ್ರ ಲೋಕಸೇವಾ ಆಯೋಗ ನಡೆಸುವ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ (ಎನ್‌ಡಿಎ) ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಭದ್ರಾವತಿಯ ತಿಮ್ಮಾಪುರ ಗ್ರಾಮದ ಶ್ರೇಯಾ ಎನ್.ಗೌಡ ಅವರ ಮನೆಗೆ ಸಾಲು ಸಾಲು ಗಣ್ಯರು ಭೇಟಿ ನೀಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. (ಈ ಸುದ್ದಿಯನ್ನು ಇನ್ನು 102 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಸಂಸದ ರಾಘವೇಂದ್ರ ಭೇಟಿ

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಇಂದು ಶ್ರೇಯಾ ಅವರ ಮನೆಗೆ ಭೇಟಿ ನೀಡಿದ್ದರು. ಶ್ರೇಯಾ ಅವರನ್ನು ಅಭಿನಂದಿಸಿ ಶುಭಾಶಯ ತಿಳಿಸಿದರು.

BY-Raghavendra-and-BS-Ganesh-Felicitates-Shreya-N-Gowda-who-secured-1st-rank-in-NDA-Exams

ದೇಶದ ಪ್ರತಿ ಮನೆಯಲ್ಲಿಯು ದೇಶಭಕ್ತ ಯುವಕರು ಸಿದ್ದರಾಗಬೇಕು ಎಂಬುವುದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ. ಭದ್ರಾವತಿಯ ಶ್ರೇಯಾ ಅವರು ಇದಕ್ಕೆ ಪ್ರೇರಣೆಯಾಗಿದ್ದಾರೆ. ಅವರ ರಕ್ತದ ಕಣಕಣದಲ್ಲಿಯು ದೇಶಭಕ್ತಿ ಇರುವುದರಿಂದ ಎನ್‌ಡಿಎ ಪರೀಕ್ಷೆಯಲ್ಲಿ ಪ್ರಾಥಮ ಸ್ಥಾನ ಪಡೆದಿದ್ದಾರೆ.

– ಬಿ.ವೈ.ರಾಘವೇಂದ್ರ, ಸಂಸದ

ಕೇಂದ್ರ ಸಚಿವರಿಗೆ ಫೋನ್‌

ತಮ್ಮ ಭೇಟಿಯ ವೇಳೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಕರೆ ಮಾಡಿದ ಸಂಸದ ರಾಘವೇಂದ್ರ, ಶ್ರೇಯಾ ಅವರ ಸಾಧನೆ ಕುರಿತು ವಿವರಿಸಿದರು. ಫೋನ್‌ ಮೂಲಕ ಶ್ರೇಯಾ ಅವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ‘ಮೊದಲೆಲ್ಲ ಎನ್‌ಡಿಎನಲ್ಲಿ ಮಹಿಳೆಯರಿಗೆ ಅವಕಾಶ ಇರಲಿಲ್ಲ. ನಿಮ್ಮಂತಹ ಯುವತಿಯರು ಮುಂದೆ ಬರುತ್ತಿರುವುದರಿಂದ ಅಲ್ಲಿಯುವ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗು ವಿಷಯ ತಿಳಿಸುತ್ತೇನೆ’ ಎಂದರು. ಅಲ್ಲದೆ ಪರೀಕ್ಷೆ ಸಿದ್ಧತೆ ಕುರಿತು ಮಾಹಿತಿ ಪಡೆದರು.

ನಾನು ಜೆಇಇ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೆ. ಇದರಿಂದ ಪರೀಕ್ಷೆಗೆ ಅನುಕೂಲವಾಯಿತು. ಸಂದರ್ಶನಕ್ಕಾಗಿ ತರಬೇತಿ ಪಡೆದುಕೊಂಡಿದ್ದೆ. ಪೋಷಕರು, ಅಕ್ಕ, ಅಣ್ಣ ಸಹಕಾರ ನೀಡಿದ್ದರು.

– ಶ್ರೇಯಾ ಎನ್.ಗೌಡ, ಎನ್‌ಡಿಎ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಅಭ್ಯರ್ಥಿ

ಭದ್ರಾವತಿಯಲ್ಲಿ ಅದ್ಧೂರಿ ಮೆರವಣಿಗೆ

ಇನ್ನು, ಭದ್ರಾವತಿಗೆ ಆಗಮಿಸಿದ ಶ್ರೇಯಾ ಎನ್.ಗೌಡ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ವಿಐಎಸ್‌ಎಲ್‌ ಕಾರ್ಖಾನೆ ತನಕ ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಲಾಯಿತು. ಶ್ರೇಯಾ ಅವರ ಕುಟುಂಬದವರು, ಸ್ನೇಹಿತರು, ವಿಐಎಸ್‌ಎಲ್‌ ಕಾರ್ಖಾನೆ ಕಾರ್ಮಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಖಾನೆ ಗೇಟ್‌ ಮುಂಭಾಗ ಶ್ರೇಯಾ ಅವರನ್ನು ಸನ್ಮಾನಿಸಲಾಯಿತು.

ಶ್ರೇಯಾಗೆ ಶುಭಾಶಯ ತಿಳಿಸಿದ ಗಣೇಶ್‌

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್‌.ಗಣೇಶ್‌ ಅವರು ವಿಐಎಸ್‌ಎಲ್‌ ಗೇಟ್‌ ಮುಂಭಾಗ ಶ್ರೇಯಾ ಅವರನ್ನು ಅಭಿನಂದಿಸಿದರು.

ನಿಮ್ಮ ಸಾಧನೆ ಭದ್ರಾವತಿ ಮಾತ್ರವಲ್ಲದೆ, ನಾಡಿನ ಹೆಮ್ಮೆಯಾಗಿದೆ. ನಿಮ್ಮ ಪರಿಶ್ರಮ, ಛಲ ಮತ್ತು ಸಾಧನೆ ಮುಂದಿನ ಪೀಳಿಗೆಯ ಅಸಂಖ್ಯಾತ ಯುವಜನರಿಗೆ ಸ್ಫೂರ್ತಿಯಾಗಲಿ. ದೇಶ ಸೇವೆಯ ನಿಮ್ಮ ಕನಸುಗಳು ಸಾಕಾರಗೊಳ್ಳಲಿ.

– ಬಿ.ಎಸ್‌.ಗಣೇಶ್‌, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ

ಶ್ರೇಯಾ ಸಾಧನೆಗೆ ಭದ್ರಾವತಿಯ ರಾಜಕೀಯ ಪ್ರಮುಖರು, ಅಧಿಕಾರಿಗಳು, ವಿಐಎಸ್‌ಎಲ್‌ ನೌಕರರು, ಕಾರ್ಮಿಕರು ಸೇರಿ ಹಲವರು ಶುಭ ಹಾರೈಸಿದರು.